ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು ಪೇಜಾವರ ಶ್ರೀ ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದು ಮಗುವೊಂದು ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಈ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ತರಗತಿಯಿದ್ದು ಸುಮಾರು ೨೭ ಮಕ್ಕಳು ಸೋಮವಾರ ಹಾಜರಾಗಿದ್ದರು. ಹತ್ತು ಗಂಟೆಯ ಸುಮಾರಿಗೆ ಸುರಿದ ಭಾರೀ ಮಳೆಗೆ ಮೇಲ್ಚಾವಣಿ ಏಕಾಏಕಿ ಕುಸಿದು ಬಿತ್ತು. ತರಗತಿಯಲ್ಲಿದ್ದ ಶಿಕ್ಷಕಿ ಹಾಗೂ ಇತರರು ಮಕ್ಕಳನ್ನು ರಕ್ಷಿಸಲು ಮುಂದಾದರೆ,ಕೆಲವು ಮಕ್ಕಳು ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ.
ಒಂದು ಮಗುವಿಗೆ ತಲೆಗೆ ಗಾಯವಾಗಿದ್ದು ಚಿಕಿತ್ಸೆಗೆ ಕಳಿಸಲಾಯಿತು. ಮೇಲ್ಛಾವಣಿಯ ಒಂದು ಭಾಗ ಭಾರವಾಗಿ ಹೊರಭಾಗಕ್ಕೆ ಕುಸಿದು ಬಿದ್ದುದರಿಂದ ಹೆಚ್ಚಿನ ಅಪಾಯವಾಗುದು ತಪ್ಪಿದೆ. ಮೂರು ವರ್ಷದ ಹಿಂದೆ ಈ ಶಾಲೆಯನ್ನು ದುರಸ್ತಿ ಮಾಡಲಾಗಿತ್ತಾದರೂ ಏಕಾಏಕಿ ಕುಸಿದು ಬಿದ್ದಿರುವುದು ಆಶ್ಚರ್ಯ ಮೂಡಿಸಿದೆ.
ಶಾಸಕರಾದ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಕುಸಿದು ಬಿದ್ದ ಶಾಲೆಯನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡರಲ್ಲದೆ, ದುರಸ್ತಿ ಕ್ರಮಕ್ಕೆ ಬೇಕಾದ ಕ್ರಮ ಜರಗಿಸುವಂತೆ ಸೂಚಿಸಿದರು.ಮಕ್ಕಳು ಚಿಕಿತ್ಸೆ ಪಡೆಯುವ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆಗೆ ವೈದ್ಯರುಗಳಿಗೆ ಸೂಚಿದರು.