ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಪ್ರೇಲಿಯಾದ ಬೀಚ್‌ನಲ್ಲಿ ಭಾನುವಾರ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯನ್ನು ಪೊಲೀಸರು ಉಗ್ರರ ದಾಳಿ ಎಂದು ಶಂಕಿಸಿದ್ದಾರೆ.
ಇದರ ಬೆನ್ನಲ್ಲೇ ಭಾರತದಲ್ಲಿಯೂ ಯಹೂದಿಗಳ ಕಚೇರಿ ಇರುವ ಹಿನ್ನೆಲೆ, ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಪ್ರಮುಖ ಮೆಟ್ರೋ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಸಂಜೆ 6.30ರ ಸುಮಾರಿಗೆ ಬಂದೂಕುಧಾರಿ ದುಷ್ಕರ್ಮಿಗಳು ಬಾಂಡಿ ಬೀಚ್‌ನಲ್ಲಿದ್ದ ಜನರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಯಹೂದಿಗಳು ಒಂದು ವಾರ ಆಚರಿಸುವ ಹನುಕ್ಕಾ ಹಬ್ಬದ ಮೊದಲ ದಿನವೇ ಈ ದುರ್ಘಟನೆ ನಡೆದಿದೆ.
ಭಾರತದಲ್ಲೂ ಯಹೂದಿಗಳ ಹಬ್ಬವಾದ ಹನುಕ್ಕಾ ಆಚರಿಸುವ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದ್ದು, ದೇಶದಾದ್ಯಂತ ಎಚ್ಚರಿಕೆ ನೀಡಲಾಗಿದೆ. ಭಯೋತ್ಪಾದಕ ಸಂಘಟನೆಗಳು ದೆಹಲಿ, ಬೆಂಗಳೂರು ಮತ್ತು ಮುಂಬೈನಲ್ಲಿರುವ ಯಹೂದಿ ಸಂಸ್ಥೆಗಳು ಮತ್ತು ಕೇಂದ್ರಗಳ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಲು ಯೋಜಿಸಿವೆ ಎಂಬ ಗಂಭೀರ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಈ ಹಿನ್ನೆಲೆ, ಏರ್ಪೋರ್ಟ್‌ಗಳಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ.
ಏನಿದು ಘಟನೆ?
ಹನುಕ್ಕಾ ಹಬ್ಬ ಆರಂಭದ ದಿನ ಹಿನ್ನೆಲೆಸಿಡ್ನಿ ಬೀಚ್‌ನಲ್ಲಿದ್ದ ಸಾವಿರಾರು ಜನರು ಸೇರಿದ್ದರು. ಈ ವೇಳೆ ಸ್ಥಳಕ್ಕೆ ನುಗ್ಗಿದ್ದ ಬಂದೂಕುಧಾರಿ ಮನಬಂದಂತೆ ಗುಂಡು ಹಾರಿಸಲು ಶುರು ಮಾಡಿದ್ದ. ಸದ್ಯ ಒಬನನ್ನು ಹೊಡೆದುರುಳಿಸಲಾಗಿದ್ದು, ಇನ್ನೋರ್ವನನ್ನು ಬಂಧಿಸಲಾಗಿದೆ.
ಓರ್ವ ಶಂಕಿತನನ್ನು ನವೀದ್ ಅಕ್ರಮ್ ಎಂದು ಗುರುತಿಸಲಾಗಿದೆ. ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಇದು ಯೋಜಿತ ದಾಳಿ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

