ಹೊಸದಿಗಂತ ಹಾವೇರಿ:
ಆಕಸ್ಮಿಕ ಕಾಣಿಸಿಕೊಂಡು ಬೆಂಕಿ, ಧಗಧಗನೆ ಹೊತ್ತಿ ಉರಿದು ಐದು ಅಂಗಡಿಗಳು ಸುಟ್ಟು ಭಸ್ಮವಾದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಇಲೆಕ್ಟ್ರಿಕಲ್ ಅಂಗಡಿ, ಬೇಕರಿ, ಬೊಂಬೆ ಅಂಗಡಿ, ಪುಟವೇರ್ ಅಂಗಡಿ ಮತ್ತು ಹೊಟೇಲ್ ಬೆಂಕಿಯಿಂದ ಹೊತ್ತಿ ಉರಿದಿದ್ದು ಅಂಗಡಿಯಲ್ಲಿನ ಲಕ್ಷಾಂತರ ಮೌಲ್ಯದ ವಿವಿಧ ವಸ್ತುಗಳು ಸುಟ್ಟು ಕರಕಲಾಗಿವೆ. ಪುಟವೇರ್ ಅಂಗಡಿಯಿಂದ ದಟ್ಟಹೊಗೆ ಕಾಣಿಸಿಕೊಂಡಿದ್ದು, ದಟ್ಟವಾದ ಹೊಗೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಐದು ಅಂಗಡಿಗಳಲ್ಲಿ ಸುಮಾರು ಮೂವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ.
ಹಂಸಭಾವಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡದ ವಿಷಯ ತಿಳಿದ ತಕ್ಷಣ ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಘಟನಾ ಸ್ಥಳಕ್ಕೆ ದೌಡಾಯಿಸಿದರು. ಅಗ್ನಿ ಅವಘಡ ಸಂಭವಿಸಿದ್ದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೆ ಒಳಗಾದ ಅಂಗಡಿಗಳ ಮಾಲೀಕರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಹಾನಿಗೆ ಒಳಗಾದವರಿಗೆ ಸರಕಾರದಿಂದ ಬರುವ ಪರಿಹಾರ, ಸೌಲಭ್ಯ ಕೊಡಿಸುವ ಭರವಸೆ ನೀಡಿದ್ದಾರೆ.
ಹಿರೇಕೆರೂರು ತಹಶೀಲ್ದಾರ, ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ, ಹಂಸಭಾವಿ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.