ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೇ ನಿಮಿಷಗಳ ಸಮಯ ಉಳಿಸಿಕೊಳ್ಳಲು ತೆಗೆದುಕೊಂಡ ನಿರ್ಧಾರ ಒಂದು ಕುಟುಂಬವನ್ನೇ ಸರ್ವನಾಶ ಮಾಡಿದ ಘಟನೆ ಮಹಾರಾಷ್ಟ್ರದ ಮುಂಬೈ ಸಮೀಪ ಸಂಭವಿಸಿದೆ.
ಶಾರ್ಟ್ಕಟ್ ರಸ್ತೆಯಲ್ಲಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬಾವಿಗೆ ಉರುಳಿದ ಪರಿಣಾಮ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ 6 ಮಂದಿ ಮಕ್ಕಳು ಮೃತಪಟ್ಟಿರುವುದು ಹೃದಯವಿದ್ರಾವಕವಾಗಿದೆ.
ಮೃತರು ದರ್ಗುಡೆ ಕುಟುಂಬದವರಾಗಿದ್ದು, ದಿಂಡೋರಿ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಊರಿಗೆ ಮರಳುತ್ತಿದ್ದರು. ಸಂಜೆ ವೇಳೆಗೆ ಮುಖ್ಯರಸ್ತೆಯಲ್ಲಿ ಸಂಚಾರ ಹೆಚ್ಚು ಇರುವ ಕಾರಣ, ಶೀಘ್ರವಾಗಿ ಮನೆ ತಲುಪಲು ಶಾರ್ಟ್ಕಟ್ ಮಾರ್ಗವನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ಆದರೆ ದಾರಿಯ ಮಧ್ಯೆ ಕಾರು ರಸ್ತೆ ಬದಿಯ ಬಾವಿಯ ಗೋಡೆಗೆ ಡಿಕ್ಕಿ ಹೊಡೆದು ನೇರವಾಗಿ ಒಳಗೆ ಉರುಳಿದೆ. ಸುಮಾರು 40 ಅಡಿ ಆಳದ ನೀರು ಇರುವ ಬಾವಿಗೆ ವಾಹನ ಬಿದ್ದ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಕತ್ತಲೆ ಮತ್ತು ಬಾವಿಯ ಆಳದ ಕಾರಣ ಕಾರ್ಯಾಚರಣೆ ಕಷ್ಟಕರವಾಗಿತ್ತು.
ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಈಜುಗಾರರು ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಕಾರನ್ನು ಹೊರತೆಗೆದರೂ, ಅದರೊಳಗಿದ್ದ ಎಲ್ಲರೂ ಮೃತಪಟ್ಟಿರುವುದು ದೃಢಪಟ್ಟಿದೆ. ಒಂದು ಮಗುವಿನ ಮೃತದೇಹ ಕಾರಿನ ಹೊರಭಾಗದಲ್ಲೂ ಪತ್ತೆಯಾಗಿದೆ.
ಈ ಘಟನೆಯ ನಂತರ ಬಾವಿಯ ಸುರಕ್ಷತಾ ಕ್ರಮಗಳ ಕೊರತೆ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ನಿರ್ಮಾಣವಾದ ಬಳಿಕವೂ ಬಾವಿಯನ್ನು ಮುಚ್ಚದಿರುವುದರ ಬಗ್ಗೆ ಅಧಿಕಾರಿಗಳ ವಿರುದ್ಧ ಪ್ರಶ್ನೆಗಳು ಕೇಳಿಬರುತ್ತಿವೆ.



