ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತಕ್ಕೆ ಯಾವುದೇ ನಷ್ಟವಾಗಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಹೇಳಿದ್ದಾರೆ.
ಚೆನ್ನೈನ ಐಐಟಿ ಮದ್ರಾಸ್ನ 62ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ದೋವಲ್, ವಿದೇಶಿ ಮಾಧ್ಯಮಗಳು ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತವು ತುಂಬಾ ನಷ್ಟ ಅನುಭವಿಸಿದೆ, ರಫೇಲ್ ಯುದ್ಧ ವಿಮಾನವನ್ನು ಕಳೆದುಕೊಂಡಿದೆ ಎಂದು ವರದಿಗಳನ್ನು ಬಿತ್ತರಿಸಿದ್ದವು. ಆದರೆ ಅದು ಹೌದು ಎನ್ನುವಂಥಾ ಒಂದು ಫೋಟೊವಿದ್ದರೆ ನಮಗೆ ಕೊಡಿ ಎಂದು ಖಡಕ್ ಆಗಿ ಶವಗಳು ಹಾಕಿದ್ದಾರೆ.
ಭಾರತವು ಪಾಕಿಸ್ತಾನದ ಮೇಲೆ ನಡೆಸಿರುವ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಯಶಸ್ಸನ್ನು ಶ್ಲಾಘಿಸಿದರು. ರಕ್ಷಣಾ ಸಾಮರ್ಥ್ಯಗಳಲ್ಲಿ ಭಾರತದ ಸ್ವಾವಲಂಬನೆಯನ್ನು ಒತ್ತಿ ಹೇಳಿದ್ದಾರೆ.
ನಿರ್ದಿಷ್ಟವಾಗಿ ನ್ಯೂಯಾರ್ಕ್ ಟೈಮ್ಸ್ ಅನ್ನು ಹೆಸರಿಸಿದ ಅಜಿತ್ ಧೋವಲ್, ಕೆಲವು ಆಯ್ದ ಚಿತ್ರಗಳನ್ನು ಆಧರಿಸಿ ಪಾಕಿಸ್ತಾನದ 13 ವಾಯುನೆಲೆಗಳ ಬಗ್ಗೆ ಹಲವು ವಿಷಯಗಳನ್ನು ಹೇಳಿವೆ. ಆದರೆ ಮೇ 10 ರ ಮೊದಲು ಮತ್ತು ನಂತರದ ಪಾಕಿಸ್ತಾನದ 13 ವಾಯುನೆಲೆಗಳ ಉಪಗ್ರಹ ಚಿತ್ರಗಳನ್ನು ನೋಡಿ. ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಭಾರತವು ಪಾಕಿಸ್ತಾನದೊಳಗೆ ನುಗ್ಗಿ 9 ಉಗ್ರರ ನೆಲೆಗಳನ್ನು ನಾಶಪಡಿಸಿದೆ.ಅದು ಗಡಿ ಪ್ರದೇಶದಿಂದ ದೂರ ಇದೆ. ನಾವು ಅದನ್ನು ಬಿಟ್ಟು ಬೇರೆಲ್ಲಿಯೂ ದಾಳಿ ಮಾಡಿಲ್ಲ. ಯಾರು ಎಲ್ಲಿದ್ದಾರೆಂಬ ಮಾಹಿತಿ ನಿಖರವಾಗಿತ್ತು. ಇಡೀ ಕಾರ್ಯಾಚರಣೆಯನ್ನು ಕೇವಲ 23 ನಿಮಿಷಗಳಲ್ಲಿ ಪೂರ್ಣಗೊಳಿಸಲಾಗಿದೆ. ಯಾವುದೇ ತಪ್ಪಿಗೆ ಅವಕಾಶವಿಲ್ಲ, ಯಾವುದೇ ಅನಿರೀಕ್ಷಿತ ಹಾನಿಯನ್ನುಂಟು ಮಾಡಿಲ್ಲ. ಈ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಹಾನಿಯುಂಟಾಗಿದೆ ಎಂದು ತೋರಿಸುವ ಒಂದು ಚಿತ್ರವಿದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.