ಹೊಸ ದಿಗಂತ ವರದಿ, ಹಾನಗಲ್ಲ:
ಇಲ್ಲಿನ ಗೌರಮ್ಮ ಹಿರಿಯ ಪ್ರಾಥಮಿಕ ಶಾಲೆಯ 4 ನೇ ತರಗತಿ ವಿದ್ಯಾರ್ಥಿನಿ ಶ್ರಾವಣಿ ಮಹೇಶ ಕೊಟ್ರಣ್ಣನವರ ಕೇವಲ 4 ನಿಮಿಷ 19 ಸೆಕೆಂಡುಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳ ಹೆಸರುಗಳನ್ನು ಪಟಪಟನೇ ಹೇಳುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ.
ಇಲ್ಲಿನ ನವೀನ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾಗಿದ್ದ ದಿ. ಮಹೇಶ ಕೊಟ್ರಣ್ಣನವರ ಹಾಗೂ ಹೇರೂರು – ಕಲಕೇರಿ ಗ್ರಾಮದ ಬಸವೇಶ್ವರ ಪ್ರೌಢಶಾಲೆಯ ಸಿಬ್ಬಂದಿ ಚೇತನಾ ಕೊಟ್ರಣ್ಣನವರ ದಂಪತಿಯ ಸುಪುತ್ರಿ ಶ್ರಾವಣಿ ಇದೀಗ ತನ್ನ ಸಾಧನೆಯ ಮೂಲಕ ಗಮನ ಸೆಳೆದಿದ್ದು, ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾಳೆ. ಶಾಸಕ ಶ್ರೀನಿವಾಸ ಮಾನೆ ವಿದ್ಯಾರ್ಥಿನಿಯನ್ನು ಸನ್ಮಾನಿಸಿ, ಪ್ರೋತ್ಸಾಹಿಸಿದ್ದಾರೆ.