ಹೊಸದಿಗಂತ ವರದಿ,ಬಳ್ಳಾರಿ:
ನಗರದ ಪ್ರಸಿದ್ದ ಶ್ರೀ ಕೋಟೆ ಮಲ್ಲೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ, ಶನಿವಾರ ಬೆಳಿಗ್ಗೆ ಮಡಿ ತೇರು, ಸಂಜೆ ಬ್ರಹ್ಮ ರಥೋತ್ಸವ ಅತ್ಯಂತ ವಿಜಂಭಣೆಯಿಂದ ನಡೆಯಿತು. ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ, ಹೂವು, ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ಬೆಳ್ಳಂ ಬೆಳಿಗ್ಗೆ ವಿವಿಧ ಹೂವುಗಳಿಂದ ಅಲಂಕೃತ ಗೊಂಡ ಮಡಿ ತೇರನ್ನು ನೆರೆದ ಸಾವಿರಾರು ಭಕ್ತರು ಎಳೆದು ಭಕ್ತಿ ಸಮರ್ಪಿಸಿದರು. ಇದಕ್ಕೂ ಮುನ್ನ ಶ್ರೀ ಕೋಟೆ ಮಲ್ಲೇಶ್ವರ ದೇವಾಲಯದಲ್ಲಿ ಪ್ರಧಾನ ಅರ್ಚಕರ ನೇತೃತ್ವದಲ್ಲಿ ರುದ್ರಾಭಿಷೇಕ, ವಿವಿಧ ಪೂಜೆ, ಅಲಂಕಾರ, ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಜಾತ್ರೆ ಹಿನ್ನೆಲೆ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಗೆ ಚಿನ್ನದ ಅಲಂಕಾರ ಮಾಡಲಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಮಾಜಿ ಸಚಿವ ಬಿ.ಶ್ರೀರಾಮುಲು, ನಗರ ಶಾಸಕ ನಾರಾ ಭರತ್ ರೆಡ್ಡಿ, ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಪಾಲಿಕೆ ಮೇಯರ್ ಬೀ.ಶ್ವೇತಾ ಸೋಮು, ಉಪ ಮೇಯರ್ ಬಿ.ಜಾನಕಿ, ಪಾಲಿಕೆ ಸದಸ್ಯರಾದ ಪ್ರಭಾಂಜನ್ ಕುಮಾರ್, ಮಿಂಚು ಶ್ರೀನಿವಾಸ್, ಮಾಜಿ ಸದಸ್ಯ ಮರಿದೇವಯ್ಯ, ಚೇತನ ವೇಮಣ್ಣ, ಮುಲ್ಲಂಗಿ ನಂದೀಶ್, ಮಾಜಿ ಮೇಯರ್ ಬಿ.ರಾಜೇಶ್ವರಿ ಸುಬ್ಬರಾಯಡು, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಲ್ಲಿ ತಾಯಣ್ಣ ಸೇರಿದಂತೆ ವಿವಿಧ ಚುನಾಯಿತ ಜನಪ್ರತಿನಿಧಿಗಳು ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಅರ್ಚನೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಜಾತ್ರೆ ಹಿನ್ನೆಲೆ ನಾನಾ ಕಡೆಯಿಂದ ಆಗಮಿಸಿದ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು, ವಿವಿಧ ಪೂಜೆ, ಅರ್ಚನೆ ಸಲ್ಲಿಸಿದರು. ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.