Monday, October 27, 2025

ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿತಿ ಸುಧಾರಣೆ: ಐಸಿಯುನಿಂದ ವಾರ್ಡ್‌ಗೆ ಶಿಫ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಗಂಭೀರವಾಗಿ ಗಾಯಗೊಂಡು ಮೈದಾನ ತೊರೆದಿದ್ದರು. ಕ್ಯಾಚ್ ಹಿಡಿಯುವ ಪ್ರಯತ್ನದ ವೇಳೆ ಅವರು ಎಡ ಪಕ್ಕೆಲುಬಿನ ಕೆಳಭಾಗದಲ್ಲಿ ತೀವ್ರವಾಗಿ ಪೆಟ್ಟು ಬಿದ್ದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯದ ತೀವ್ರತೆಯ ಕಾರಣದಿಂದ ಅಯ್ಯರ್ ಅವರನ್ನು ಐಸಿಯುನಲ್ಲಿ ಚಿಕಿತ್ಸೆಗಾಗಿ ಇರಿಸಲಾಗಿತ್ತು.

ವರದಿಯ ಪ್ರಕಾರ, ಶ್ರೇಯಸ್ ಅಯ್ಯರ್ ಅವರ ಆರೋಗ್ಯ ಸ್ಥಿತಿ ಈಗ ಸುಧಾರಿಸುತ್ತಿದ್ದು, ಅವರನ್ನು ಐಸಿಯುನಿಂದ ಜನರಲ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಅವರ ಸ್ಥಿತಿ ಇನ್ನೂ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ವೈದ್ಯಕೀಯ ವರದಿಗಳು ತಿಳಿಸಿವೆ. ಸಿಡ್ನಿಯಲ್ಲಿ ಬಿಸಿಸಿಐ ವೈದ್ಯಕೀಯ ತಂಡವೇ ಶ್ರೇಯಸ್ ಅವರ ಚಿಕಿತ್ಸೆಯ ಮೇಲ್ವಿಚಾರಣೆಯಲ್ಲಿ ತೊಡಗಿದೆ.

ಅಯ್ಯರ್ ಅವರ ಕೆಲವು ಸ್ನೇಹಿತರು ಆಸ್ಪತ್ರೆಯಲ್ಲಿ ಅವರೊಂದಿಗೆ ಇದ್ದರೆ, ಅವರ ಕುಟುಂಬ ಸದಸ್ಯರು ವೀಸಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಮುಂಬೈನಿಂದ ಸಿಡ್ನಿಗೆ ತೆರಳುವ ಸಾಧ್ಯತೆಯಿದೆ. ಸಂಪೂರ್ಣ ಚೇತರಿಕೆಗಾಗಿಯೂ ಅವರು ಕೆಲವು ದಿನಗಳು ಸಿಡ್ನಿಯಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ.

ಬಿಸಿಸಿಐ ಪ್ರಕಟಣೆಯ ಪ್ರಕಾರ, ಅಕ್ಟೋಬರ್ 25 ರಂದು ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಅಯ್ಯರ್ ಅವರ ಎಡ ಪಕ್ಕೆಲುಬಿನ ಕೆಳಭಾಗದಲ್ಲಿ ಆಂತರಿಕ ರಕ್ತಸ್ರಾವವಾಗಿತ್ತು. ಸ್ಕ್ಯಾನಿಂಗ್ ನಂತರ ತಕ್ಷಣವೇ ಚಿಕಿತ್ಸೆ ಆರಂಭಿಸಲಾಯಿತು. ಬಿಸಿಸಿಐ ವೈದ್ಯಕೀಯ ತಂಡವು ಸಿಡ್ನಿಯ ತಜ್ಞ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶ್ರೇಯಸ್ ಅವರ ಆರೋಗ್ಯದ ಪ್ರಗತಿಯನ್ನು ದಿನನಿತ್ಯ ಪರಿಶೀಲಿಸುತ್ತಿದೆ.

error: Content is protected !!