ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಜುಲೈ 14ರಂದು ಬಾಹ್ಯಾಕಾಶದಿಂದ ಭೂಮಿಗೆ ಮರಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ 12 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರಲಿದ್ದಾರೆ. ಜೂನ್ 25, 2025ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ನಲ್ಲಿ ಉಡಾವಣೆ ಮಾಡಲಾಗಿತ್ತು.
ಶುಭಾಂಶು ಮತ್ತು ಅವರ ಸಹ ಗಗನಯಾತ್ರಿಗಳಾದ ಕಮಾಂಡರ್ ಪೆಗ್ಗಿ ವಿಟ್ಸನ್(ಯುಎಸ್ಎ), ಸ್ಲಾವೋಸ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಪು (ಹಂಗೇರಿ) ಅವರು ಜುಲೈ 10, 2025 ರ ನಂತರ ಯಾವುದೇ ಸಮಯದಲ್ಲಿ ಭೂಮಿಗೆ ಮರಳಬಹುದು. ಜುಲೈ 14 ರ ಮೊದಲು ಅವರ ಮರಳುವಿಕೆ ಸಾಧ್ಯವಿಲ್ಲ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ಹೇಳಿದೆ. ಅಂದರೆ, 3-4 ದಿನಗಳ ವಿಳಂಬವಾಗಬಹುದು ಎಂದು ಹೇಳಿದ್ದಾರೆ.
ಆಕ್ಸಿಯಮ್-4 ಸಿಬ್ಬಂದಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್ ‘ಗ್ರೇಸ್’ ನಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ. ಇದು ಅಟ್ಲಾಂಟಿಕ್ ಸಾಗರ ಅಥವಾ ಫ್ಲೋರಿಡಾ ಕರಾವಳಿಯ ಬಳಿಯ ಮೆಕ್ಸಿಕೋ ಕೊಲ್ಲಿಯಲ್ಲಿ ಮೃದುವಾದ ಸ್ಪ್ಲಾಶ್‌ಡೌನ್ ಮಾಡುತ್ತದೆ.