ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಯುವ ನಾಯಕ ಹಾಗೂ ಶ್ರೇಷ್ಠ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಈ ಬಾರಿಯ ದುಲೀಪ್ ಟ್ರೋಫಿ ಟೂರ್ನಿಯಿಂದ ಹಿಂದೆ ಸರಿಯುವ ಸಂಭವ ಹೆಚ್ಚಾಗಿದೆ. ಆಗಸ್ಟ್ 28ರಿಂದ ಆರಂಭವಾಗಲಿರುವ ಈ ದೇಶೀಯ ಟೆಸ್ಟ್ ಟೂರ್ನಿಯಲ್ಲಿ ಗಿಲ್ ಉತ್ತರ ವಲಯ ತಂಡವನ್ನು ಮುನ್ನಡೆಸಬೇಕಾಗಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ.
ಗಿಲ್ ಸಂಪೂರ್ಣವಾಗಿ ಚೇತರಿಸಿಕೊಂಡರೂ ಕೂಡ ಇಡೀ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಕಾರಣ, ಅವರು ಭಾರತ ತಂಡದ ಏಷ್ಯಾಕಪ್ ಟಿ20 ಸ್ಕ್ವಾಡ್‌ಗೆ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 9ರಿಂದ ಏಷ್ಯಾಕಪ್ ಆರಂಭವಾಗಲಿದ್ದು, ಟೂರ್ನಿಗೂ ಮುನ್ನ ಭಾರತ ತಂಡವು ವಿಶೇಷ ಶಿಬಿರ ಏರ್ಪಡಿಸಲಿದೆ. ಹೀಗಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಗಿಲ್ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ದುಲೀಪ್ ಟ್ರೋಫಿ ಆಗಸ್ಟ್ 28ರಿಂದ ಸೆಪ್ಟೆಂಬರ್ 15ರವರೆಗೆ ನಡೆಯಲಿದ್ದು, ದಿನಾಂಕಗಳ ಗೊಂದಲದಿಂದಾಗಿ ಗಿಲ್ ಎರಡು ಟೂರ್ನಿಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಉತ್ತರ ವಲಯ ತಂಡವನ್ನು ಅಂಕಿತ್ ಕುಮಾರ್ ಮುನ್ನಡೆಸುವ ಸಾಧ್ಯತೆಯಿದೆ.
ಉತ್ತರ ವಲಯ ತಂಡದಲ್ಲಿ ಶುಭಂ ಖಜುರಿಯಾ, ಆಯುಷ್ ಬದೋನಿ, ಯಶ್ ಧುಲ್, ಅಂಕಿತ್ ಕಲ್ಸಿ, ನಿಶಾಂತ್ ಸಂಧು, ಸಾಹಿಲ್ ಲೋತ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಸೇರಿದಂತೆ ಅನೇಕ ಯುವ ಆಟಗಾರರಿಗೆ ಅವಕಾಶ ದೊರೆತಿದೆ.