ತೆಂಕುತಿಟ್ಟು ಯಕ್ಷಗಾನದ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ವಿಧಿವಶ

ಹೊಸದಿಗಂತ ವರದಿ, ಮಂಗಳೂರು:

ಕರಾವಳಿಯ ನೀರವ ರಾತ್ರಿಗಳನ್ನು ತನ್ನ ಅದ್ಭುತ ಬಣ್ಣದ ವೇಷಗಳ ಮೂಲಕ ಬೆಳಗಿ ಅಪ್ರತಿಮ ಬಣ್ಣದ ವೇಷಧಾರಿ ಎಂಬ ನೆಗಳ್ತೆಗೆ ಪಾತ್ರರಾಗಿದ್ದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಇನ್ನು ನೆನಪು ಮಾತ್ರ.

ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರು ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ನಿಧನ ಹೊಂದಿದರು.

೧೯೬೫ ಡಿಸೆಂಬರ್ ೧೭ರಂದು ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆ ಎಂಬಲ್ಲಿ ಬಾಬು ಶೆಟ್ಟಿಗಾರ್- ಗಿರಿಯಮ್ಮ ದಂಪತಿ ಪುತ್ರನಾಗಿ ಜನಿಸಿದ ಅವರು ಸಿದ್ಧಕಟ್ಟೆ ಸೈಂಟ್ ಮೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದರು. ರೆಂಜಾಳ ರಾಮಕೃಷ್ಣ ರಾವ್, ಬಣ್ಣದ ಮಹಾಲಿಂಗ ಅವರಿಂದ ಯಕ್ಷಗಾನ ಬಣ್ಣದ ವೇಷದ ದೀಕ್ಷೆ ಪಡೆದ ಶೆಟ್ಟಿಗಾರ್ ಅವರು ಇರಾ ಗೋಪಾಲಕೃಷ್ಣ ಭಾಗವತ, ಸುಣ್ಣಂಬಳ ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥ ಭಟ್ ಅವರಿಂದ ಹೆಚ್ಚಿನ ಯಕ್ಷ ಶಿಕ್ಷಣ ಪಡೆದರು.

೨ ವರ್ಷ ಕಟೀಲು ೨ನೇ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ, ಕಟೀಲು ೧ನೇ ಮೇಳದಲ್ಲಿ ೮ ವರ್ಷಗಳ ಕಾಲ ಬಣ್ಣದ ವೇಷಧಾರಿಯಾಗಿ ತಿರುಗಾಟ, ಬಳಿಕ ೧೩ ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ತಿರುಗಾಟ. ನಂತರದ ಈ ಹದಿನೆಂಟು ವರ್ಷಗಳಲ್ಲಿ ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳಗಳಲ್ಲಿ ತಿರುಗಾಟ ನಡೆಸಿ, ೨೦೨೫ರಲ್ಲಿ ನಿವೃತ್ತಿ ಹೊಂದಿದ್ದರು.

ಬಣ್ಣದ ವೇಷಧಾರಿಯಾಗಿ ಸತೀಶ ನೈನಾಡು, ಶಬರೀಶ ಮಾನ್ಯ, ಮನೀಷ್ ಪಾಟಾಳಿ, ಮಧುರಾಜ್ ಪಾಟಾಳಿ, ಸುಬ್ರಹ್ಮಣ್ಯ ಭಟ್ ಬದಿಯಡ್ಕ, ಸಚಿನ್ ಪಾಟಾಳಿ, ಶ್ರೀಶ ಮಣಿಲ, ರಂಜಿತ್ ಗೋಳಿಯಡ್ಕ ಮೊದಲಾದವರಿಗೆ ಸದಾಶಿವ ಶೆಟ್ಟಿಗಾರ್ ಅವರು ವಿದ್ಯಾದಾನ ಮಾಡಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ೪೧ ವರ್ಷಗಳ ಕಾಲ ವ್ಯವಸಾಯ ನಡೆಸಿದ್ದಾರೆ. ಪಾರಂಪರಿಕ ಬಣ್ಣದ ವೇಷಧಾರಿಯಾಗಿ ಗುರು ಬಣ್ಣದ ಮಹಾಲಿಂಗ ಅವರ ನಡೆಯನ್ನು ರಂಗದಲ್ಲಿ ಪ್ರದರ್ಶಿಸುತ್ತಿದ್ದರು.

ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಭ್ರಾಮರೀ ಯಕ್ಷಮಣಿ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಸನ್ಮಾನಗಳು ಅವರಿಗೆ ಸಂದಿವೆ. ಜುಲೈ ೭ರಂದು ಮಂಗಳೂರು ವಿಶ್ವವಿದ್ಯಾಲಯದಿಂದ ಯಕ್ಷಮಂಗಳ ಪ್ರಶಸ್ತಿ ಸ್ವೀಕರಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!