ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ: ಸೆಪ್ಟೆಂಬರ್ ಕ್ರಾಂತಿಯ ಮೊದಲ ಹೆಜ್ಜೆ ಇದೇನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ರಾಜಕೀಯದಲ್ಲಿ ‘ಸೆಪ್ಟೆಂಬರ್ ಕ್ರಾಂತಿ’ ಕುರಿತು ಭಾರೀ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಐಸಿಸಿ ಹಿಂದುಳಿದ ವರ್ಗಗಳ (ಒಬಿಸಿ) ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರಾಗಿ ನೇಮಿಸಿರುವುದು ಹೊಸ ಕುತೂಹಲಕ್ಕೆ ಕಾರಣವಾಗಿದೆ. ಈ ನೇಮಕಾತಿಯಿಂದ, ಸಿದ್ದರಾಮಯ್ಯ ಅವರು ರಾಜ್ಯ ಸಿಎಂ ಹುದ್ದೆಯಿಂದ ಹೊರಬಿದ್ದು ರಾಷ್ಟ್ರ ರಾಜಕಾರಣದತ್ತ ಮುಖಮಾಡಲಿದ್ದಾರೆಯೇ ಎಂಬ ಚರ್ಚೆ ನಡೆಯುತ್ತಿದೆ.

ಈ ಸಲಹಾ ಮಂಡಳಿಯ ಚಟುವಟಿಕೆಗಳನ್ನು ಆರಂಭಿಸಲು ಎಐಸಿಸಿ ತೀರ್ಮಾನಿಸಿದ್ದು, ಇದೇ ಜುಲೈ 15ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಭಾರತ್ ಜೋಡೊ ಭವನದಲ್ಲಿ ಮೊದಲ ಸಭೆ ನಡೆಯಲಿದೆ. ದೇಶದಾದ್ಯಂತದ ಒಬಿಸಿ ನಾಯಕರು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರು ಸೇರಿ 90ಕ್ಕೂ ಹೆಚ್ಚು ಮಂದಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದರ ನೇತೃತ್ವವನ್ನು ಸಿದ್ದರಾಮಯ್ಯ ವಹಿಸುತ್ತಿದ್ದಾರೆ.

ಒಬಿಸಿ ಸಲಹಾ ಮಂಡಳಿ ರಚನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಪ್ಪಿಗೆ ನೀಡಿದ್ದಾರೆ. ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿ 24 ಸದಸ್ಯರಿದ್ದ ಈ ಮಂಡಳಿಯಲ್ಲಿ ಬಿ.ಕೆ. ಹರಿಪ್ರಸಾದ್, ಎಂ. ವೀರಪ್ಪ ಮೊಯಿಲಿ ಸೇರಿದಂತೆ ಕರ್ನಾಟಕದ ಹಿರಿಯ ನಾಯಕರು ಸೇರಿದ್ದಾರೆ. ಈ ಮೂಲಕ, ಒಬಿಸಿ ಸಮುದಾಯದ ಹಿತಾಸಕ್ತಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಉನ್ನತವಾಗಿ ಪ್ರತಿನಿಧಿಸಲು ಕಾಂಗ್ರೆಸ್ ಪಕ್ಷ ತಂತ್ರ ರೂಪಿಸಿಕೊಂಡಿದೆ.

‘5 ವರ್ಷ ನಾನು ಸಿಎಂ’ ಎಂಬ ಭರವಸೆ ನೀಡಿರುವ ಸಿದ್ದರಾಮಯ್ಯ ಅವರನ್ನು, ಈಗ ರಾಷ್ಟ್ರೀಯ ಸಲಹಾ ಮಂಡಳಿಯ ಮುಖ್ಯಸ್ಥರಾಗಿ ನೇಮಿಸಿರುವುದರಿಂದ, ಅವರನ್ನು ರಾಜ್ಯ ರಾಜಕೀಯದಿಂದ ರಾಷ್ಟ್ರೀಯ ಮಟ್ಟದ ಜವಾಬ್ದಾರಿಗೆ ತಿರುಗಿಸಲು ಉದ್ದೇಶವಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಇದು ಕೂಡ ಸೆಪ್ಟೆಂಬರ್ ಕ್ರಾಂತಿಯ ಭಾಗವಲ್ಲವೇ? ಎಂಬ ಶಂಕೆ ರಾಜಕೀಯ ವಲಯದಲ್ಲಿ ಹೆಚ್ಚುತ್ತಿದೆ.

ಮಂಡಳಿಯ ಮೊದಲ ಸಭೆಯಲ್ಲಿ ಒಬಿಸಿ ಸಮುದಾಯದ ಸಮಸ್ಯೆಗಳು, ಭವಿಷ್ಯದ ಕಾರ್ಯತಂತ್ರಗಳು, ಕಾಂಗ್ರೆಸ್ ಕೈಗೆತ್ತಿಕೊಳ್ಳಬೇಕಾದ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ. ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸಲು ಮತ್ತು ಅಭಿವೃದ್ಧಿಗೆ ಪಥದರ್ಶನ ನೀಡುವುದು ಈ ವೇದಿಕೆಯ ಉದ್ದೇಶವಾಗಿದೆ.

ಸಲಹಾ ಮಂಡಳಿಯ ಪ್ರಮುಖ ಸದಸ್ಯರು
ಸಿದ್ದರಾಮಯ್ಯನವರ ಜೊತೆಗೆ ಅಶೋಕ್ ಗೆಹ್ಲೋಟ್, ಭೂಪೇಶ್ ಬಘೇಲ್, ವಿ. ನಾರಾಯಣಸ್ವಾಮಿ, ಸಚಿನ್ ಪೈಲಟ್, ಡಾ. ವೀರಪ್ಪ ಮೊಯಿಲಿ, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ರಾಜ್ಯಗಳ ಉನ್ನತ ಮಟ್ಟದ ನಾಯಕರನ್ನು ಈ ಸಮಿತಿಗೆ ಸೇರಿಸಲಾಗಿದೆ. ಅಜಯ್ ಲಲ್ಲು, ಹೀನಾ ಕಾವ್ರೆ, ಡಾ. ಅನಿಲ್ ಜೈಹಿಂದ್‌ ಅವರು ಕಾರ್ಯದರ್ಶಿಗಳಾಗಿ ನೇಮಕವಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!