ಸಾಲ ತಂದು ಹೋಳಿಗೆ ತಿಂದಂತಿದೆ ಈ ಬಜೆಟ್ : ವಿಪಕ್ಷ ನಾಯಕ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರಕಾರ ರಾಜ್ಯವನ್ನು ಸಾಲದ ಹೊರೆಯಲ್ಲಿ ಮುಳುಗಿಸಿದೆ. ಇದು ಡಬ್ಬಲ್ ಇಂಜಿನ್ ಸರಕಾರವಲ್ಲ, ಡಬ್ಬಾ ಸರಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಛೇಡಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಬಜೆಟ್ ಮೇಲೆ ಚರ್ಚೆ ಮಂಡಿಸಿದ ಅವರು, ಬಿಜೆಪಿಯವರು ಅಧಿಕಾರಕ್ಕೆ ಬಂದು 3 ಆರ್ಥಿಕ ವರ್ಷಗಳು ಮುಗಿಯುತ್ತವೆ. ಮಂಡಿಸಿರುವ ಬಜೆಟ್ ನಾಲ್ಕನೇ ವರ್ಷದ್ದು. 2023 ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುತ್ತದೆ. ಈ ಮೂರು ವರ್ಷಗಳ ಅವಧಿಯಲ್ಲಿ ಏನು ಮಾಡಿದ್ದೀರಿ ಎಂಬ ಸಾಧನೆಗಳನ್ನು ಬಜೆಟ್‌ನಲ್ಲಿ ಹೇಳಿಲ್ಲ. ಹೊಸ ಮುಖ್ಯಮಂತ್ರಿ, ಹೊಸ ಸರಕಾರ ಬಂದಾಗ ಆಶ್ವಾಸನೆಗಳ ಪಟ್ಟಿ ಇಡುವಂತಹ ರೀತಿಯಲ್ಲಿದೆ ಈ ಬಜೆಟ್ ಎಂದರು.

ಹಿಂದಿನ ಚುನಾವಣೆಯಲ್ಲಿ ಡಬ್ಬಲ್ ಇಂಜಿನ್ ಸರಕಾರ ಬಂದರೆ ಕರ್ನಾಟಕದಲ್ಲಿ ಸ್ವರ್ಗ ನಿರ್ಮಾಣವಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ ಈ ಬಜೆಟ್ ನೋಡಿದರೆ ಡಬ್ಬಲ್ ಇಂಜಿನ್ ಸರಕಾರ ಅಲ್ಲ, ಇದು ಡಬ್ಬಾ ಸರಕಾರ. ಇಂಜಿನ್‌ಗಳು ಕೆಟ್ಟು ಹೋಗಿವೆ. ಈಗ ಇದು ಜನ ವಿರೋಧಿ, ಜನ ದ್ರೋಹದ ಬಜೆಟ್ ಆಗಿದೆ. ಇದಕ್ಕೆ ಯಾವುದೇ ಗೊತ್ತು ಗುರಿ, ಮುನ್ನೋಟ ಇಲ್ಲದ ಬಜೆಟ್. ಅಭಿವೃದ್ಧಿಗೆ, ಬೆಳವಣಿಗೆಗೆ ಪೂರಕವಾಗಿಲ್ಲ, ಆ ರೀತಿಯ ನಿರಾಶಾದಾಯಕ ಆಯವ್ಯಯ ಎಂದು ಸಿದ್ದರಾಮಯ್ಯ ಹೇಳಿದರು.

ಕಾಯ್ದೆಯ ಮಾನದಂಡಗಳ ಉಲ್ಲಂಘನೆ
ಮುಖ್ಯಮಂತ್ರಿಗಳು 2022-23ರ ಸಾಲಿನಲ್ಲಿ ₹ 2,65,270 ಕೋಟಿ ಖರ್ಚು ತೋರಿಸಿದ್ದಾರೆ. ಅದರಲ್ಲಿ ಆದಾಯ ಠೇವಣಿ ₹ 14,699 ಕೋಟಿ ಮಾತ್ರ. ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿದೆ. ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ 2003ರಲ್ಲಿ ನೀಡಿರುವ ಎಲ್ಲ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ. ಆದಾಯ ರಸೀದಿಗಳಿಗಿಂತ ವೆಚ್ಚ ಜಾಸ್ತಿಯಾಗಿದೆ. ಜಿಎಸ್‌ಡಿಪಿ(ರಾಜ್ಯದ ಆಂತರಿಕ ಉತ್ಪನ್ನ)ಯ ಶೇ. 25ಕ್ಕಿಂತ ಹೆಚ್ಚು ಸಾಲ ಮಾಡಲಾಗಿದೆ.

ಆರ್ಥಿಕ ಶಿಸ್ತು ಇದ್ದರಷ್ಟೇ ಅಭಿವೃದ್ಧಿ
ನಾನು ಆರು ಆರ್ಥಿಕ ವರ್ಷಗಳಲ್ಲಿ ಎಂಟು ಬಜೆಟ್‌ಗಳನ್ನು ಮಂಡಿಸಿದ್ದೇನೆ. ಆಗ ಕಾಯ್ದೆಯ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಎಂಟು ಬಜೆಟ್ ಮಂಡಿಸಿದಾಗಲೂ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲಾಗಿತ್ತು. ಆರ್ಥಿಕ ಶಿಸ್ತು ಕಾಪಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ರೆವೆನ್ಯೂ ಡಿಪಾಸಿಟ್‌ಗೆ ಹೋದರೆ ಸಾಲ ತೀರಿಸಬೇಕು, ಇದು ಸಾಲ ತೆಗೆದುಕೊಂಡು ಬಂದು ಹೋಳಿಗೆ ತಿಂದಂತೆ ಆಗುತ್ತದೆ. ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ಮಾಡಬೇಕು. ಇದು ನಮ್ಮ ಸಾಮರ್ಥ್ಯಕ್ಕೆ ವಿರುದ್ಧವಾಗಿರುವಂತಹದ್ದು ಎಂದು ಸಿದ್ದರಾಮಯ್ಯ ಹೇಳಿದರು.

ಮುಂದಿನ ಸಾಲಿಗೆ ₹ 5,18,366 ಕೋಟಿ ಸಾಲ
ರಾಜ್ಯದಲ್ಲಿ 2019ರವರೆಗೆ ಇದ್ದ ಸಾಲ ₹ 2.42 ಲಕ್ಷ ಕೋಟಿ. 2022-23ನೇ ಸಾಲಿನ ಆರ್ಥಿಕ ವರ್ಷಕ್ಕೆ ₹ 5,18,366 ಕೋಟಿ ಸಾಲ ಮಾಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ₹ 3ಲಕ್ಷ ಕೋಟಿ ಸಾಲ ಜಾಸ್ತಿಯಾಗಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ₹ 2,64,368.66 ಕೋಟಿ ಸಾಲ ಮಾಡಿದೆ. ಇದಕ್ಕೆ 2021-22ನೇ ಸಾಲಿನಲ್ಲಿ ₹ 27,161 ಕೋಟಿ ಬಡ್ಡಿ ಕಟ್ಟಲಾಗುತ್ತಿದೆ. ಮುಂದಿನ ವರ್ಷಕ್ಕೆ ₹ 29,397 ಕೋಟಿ ಕಟ್ಟಬೇಕು. ಇದರ ಜೊತೆಗೆ ಅಸಲನ್ನೂ ಕಟ್ಟಬೇಕು. ₹ 43,000 ಕೋಟಿಗೂ ಹೆಚ್ಚು ಅಸಲು ಬಡ್ಡಿಯನ್ನು ಕಟ್ಟಬೇಕು. 2023-24ನೇ ಸಾಲಿನಲ್ಲಿ ₹ 35,091 ಕೋಟಿ, 2024-25ನೇ ಸಾಲಿನಲ್ಲಿ ₹ 38,629 ಕೋಟಿ ಮತ್ತು 2025-26ನೇ ಸಾಲಿನಲ್ಲಿ ₹ 42,789 ಕೋಟಿ ಬಡ್ಡಿ ಕಟ್ಟಬೇಕು. ಯದ್ವಾತದ್ವಾ ಸಾಲ ಬೆಳೆಯುತ್ತಿದೆ. ಮುಂದಿನ ವರ್ಷ ಸಾಲ ಶೇ. 27.42ರಷ್ಟು ಬರುತ್ತದೆ ಎಂದು ಸಿದ್ದರಾಮಯ್ಯ ಅಂಕಿಅಂಶಗಳ ಸಹಿತ ವಿವರಿಸಿದರು.

ಕೋವಿಡ್‌ಗೆ ಖರ್ಚು ಮಾಡಿದ್ದು ₹ 8000 ಕೋಟಿ
ವೈಫಲ್ಯ ಮುಚ್ಚಲು ಎರಡು ವರ್ಷ ಕೋವಿಡ್ ಇತ್ತು, ಲಾಕ್‌ಡೌನ್ ಇತ್ತು. ಇದರಿಂದ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ, ತೆರಿಗೆ ವಸೂಲಿ ಕುಂಠಿತವಾಗಿದೆ. ಅದಕ್ಕಾಗಿ ಸಾಲ ಮಾಡಬೇಕಾಗಿ ಬಂತು. ಸಾಲದ ಹೊರೆ ಜಾಸ್ತಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದಿದ್ದಾರೆ. ಆದರೆ ಕೋವಿಡ್ ರೋಗ ನಿಭಾಯಿಸಲು 2020-21ರಲ್ಲಿ ₹ 5300 ಕೋಟಿ ಖರ್ಚಾಗಿದೆ. 2021-22ರಲ್ಲಿ ₹ 2240 ಕೋಟಿ ಖರ್ಚು ಆಗಿದೆ. ಒಟ್ಟು ಸುಮಾರು ₹ 8000 ಕೋಟಿಗಳನ್ನು ಸಾಂಕ್ರಾಮಿಕ ರೋಗ ನಿಭಾಯಿಸಲು ಖರ್ಚು ಮಾಡಲಾಗಿದೆ ಎಂದು ಹೇಳಿದರು.

ಬಜೆಟ್ ಇಲಾಖಾವಾರು ಪಾರದರ್ಶಕವಾಗಿಲ್ಲ. ಇದರಿಂದ ಜನರಿಗೆ ಸರಿಯಾದ ಉತ್ತರದಾಯಿತ್ವ ಆಗಿಲ್ಲ. ಬಜೆಟ್ ಪಾರದರ್ಶಕವಾಗಿರಬೇಕು. ಇದು ಜನರ ತೆರಿಗೆ ಹಣ. ಅವರು ಬೆವರು ಸುರಿಸಿ ಸಂಪಾದಿಸಿ, ನೀಡಿದ ಹಣವನ್ನು ಖರ್ಚು ಮಾಡುತ್ತೇವೆ. ನಾವೆಲ್ಲ ಜನರ ಟ್ರಸ್ಟಿಗಳು. ಅವರ ಪರವಾಗಿ ಅವರು ಕೊಟ್ಟ ಹಣವನ್ನು ಖರ್ಚು ಮಾಡುತ್ತೇವೆ. ಈ ಬಜೆಟ್ ಅಂದ್ರೆ ಪ್ರತೀ ಕುಟುಂಬಸ್ಥರ ಬಜೆಟ್ ಇದು. ಇದನ್ನು ಗಮನದಲ್ಲಿರಿಸಿ ಬಜೆಟ್ ಮಂಡಿಸಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!