ಹೊಸದಿಗಂತ ವರದಿ ಬಾಗಲಕೋಟೆ :
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ನಿಂತರೂ ಸೋಲುತ್ತಾರೆ. ಬಾದಾಮಿ ಮತಕ್ಷೇತ್ರದಲ್ಲಿ ಸೋಲು ಖಚಿತ ಎಂದು ತಿಳಿದು ಬಾದಾಮಿ ಬಿಟ್ಟು ಹೋಗಿದ್ದಾರೆ ಎಂದು ಕೈಗಾರಿಕೆ ಸಚಿವ ಮುರಗೇಶ ನಿರಾಣಿ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಕೇದರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಬಾದಾಮಿಗೆ ಆಂತರಿಕವಾಗಿ ಸೋಲು ಖಚಿತ, ಈ ಹಿನ್ನಲೆ ಬಾದಾಮಿ ಬಿಟ್ಟು ಹೋಗಿದ್ದಾರೆ. ಸಿದ್ದರಾಮಯ್ಯ ನವರ ಬಗ್ಗೆ ವೈಯಕ್ತಿಕವಾಗಿ ಗೌರವ ಇದೆ ಎಂದರು.
ಇದೇ ಸಮಯದಲ್ಲಿ ಮೀಸಲಾತಿ ವಿಚಾರವಾಗಿ ಮಾತನಾಡಿ, ನಮ್ಮ ಸರ್ಕಾರ ಎಲ್ಲ ವರ್ಗದವರಿಗೂ ಅನುಕೂಲವಾಗುವಂತೆ ಮಾಡಿದೆ, ಎಲ್ಲರ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷ ಪಣತೊಟ್ಟಿದೆ. ವಿರೋಧ ಮಾಡುವ ಕಾಂಗ್ರೆಸ್ ಪಕ್ಷದವರು ಮೀಸಲಾತಿ ವಿಚಾರವಾಗಿ ಸಮಗ್ರ ಮಾಹಿತಿ ತಿಳಿದುಕೊಂಡು ಮಾತನಾಡಬೇಕಿದೆ ಎಂದು ತಿಳಿಸಿದರು.
ಮುಂದೆ ನಮ್ಮ ಸರ್ಕಾರ ಬಂದಾಗ ಈಗ ಜಾರಿಗೆ ತಂದಿರುವ ಎಲ್ಲಾ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದಮೇಲೆ ಏನು ಬದಲಾವಣೆ ಮಾಡುತ್ತಾರೆ. ಮುಂದೆ ಮತ್ತೆ ಬಿಜೆಪಿ ಸರ್ಕಾರ ಬರುತ್ತದೆ, ಮತ್ತೆ ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗುತ್ತಾರೆ. ಅದರಲ್ಲಿ ತಪ್ಪೇನಿದೆ. ಬೊಮ್ಮಯಿ ಅವರು ಒಳ್ಳೆಯ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಅವರೇ ಮತ್ತೆ ಮುಖ್ಯಮಂತ್ರಿ ಆದಲ್ಲಿ ಏನೂ ತಪ್ಪಿಲ್ಲವೆಂದರು.