ಸಿದ್ದರಾಮಯ್ಯಗೆ ಮೋದಿ, ಬಿಎಸ್ ವೈ ಕುರಿತು ಮಾತನಾಡುವ ನೈತಿಕತೆಯೇ ಇಲ್ಲ: ವಿಜಯೇಂದ್ರ

 ಹೊಸದಿಗಂತ ವರದಿ,ಬಳ್ಳಾರಿ:

ಸಚಿವ ಜಮೀರ್ ಅಹ್ಮದ್ ಖಾನ್ ಹಿಂದುಗಳ ಮಠ, ದೇಗುಲಗಳನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ, ರೈತರ ಜಮೀನುಗಳನ್ನು ಕಬಳಿಸುವ ಮೂಲಕ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ, ಇದು ಮುಂದುವರೆದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಸಿದರು.

ಸಂಡೂರು ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ, ಅಭ್ಯರ್ಥಿ ಪರ ಭಾನುವಾರ ಮತಯಾಚಿಸಿ ಮಾತನಾಡಿದರು. ಇದಕ್ಕೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿ.ಎಂ.ಸಿದ್ದರಾಮಯ್ಯ ಅವರ ಕುಮ್ಮಕ್ಕಿದ್ದು, ಇಂತಹ ಕೆಟ್ಟ ಸಂಪ್ರದಾಯವನ್ನು ಕೂಡಲೇ ನಿಲ್ಲಿಸಬೇಕು. ಈ ಕುರಿತು ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೊಸಳೆ ಕಣ್ಣೀರು ಒರೆಸುವ ತಂತ್ರಕ್ಕೆ ಮುಂದಾಗಿದ್ದಾರೆ. ಉಪ ಚುನಾವಣೆ ಹಿನ್ನೆಲೆ ಹಿನ್ನೆಡೆಯಾಗಬಾರದು ಎಂದು, ನೋಟಿಸ್ ನೀಡಿದ್ದರೆ, ಕೂಡಲೇ ವಾಪಸ್ಸು ಪಡೆಯುವೆ ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದು, ನಿವಾಗಿಯೂ ಸಿದ್ದರಾಮಯ್ಯ ಅವರಿಗೆ ಹಿಂದುಗಳ ಬಗ್ಗೆ ಗೌರವ ಅಭಿಮಾನ ಇದ್ದರೆ, ರೈತರ ಬಗ್ಗೆ ಕಾಳಜಿ, ಕಳಕಳಿ ಇದ್ದರೆ, ಕೂಡಲೇ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು, ಮೋದಿ ಅವರ ಬಗ್ಗೆ, ಬಿಎಸ್ ವೈ ಅವರ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆಯೇ ಇಲ್ಲ, ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ಟೀಕೆಗೆ ಉತ್ತರ ಕೊಡುವ ಶಕ್ತಿಯನ್ನು ಭಗವಂತ ನಮ್ಗೂ ಕೊಟ್ಟಿದ್ದಾನೆ, ಮುಖ್ಯಮಂತ್ರಿ ಎನ್ನುವುದನ್ನು ಮರೆತು, ಮೋದಿಜಿ ಹಾಗೂ ಬಿಎಸ್ ವೈ ಅವರ ಬಗ್ಗೆ ಕೆಟ್ಟ ಪದವನ್ನು ಬಳಸಿ ಮಾತನಾಡಲು ಮುದಾಗಿದ್ದಾರೆ. ಬಿಎಸ್ ವೈ ಅವರು, ಕಳೆದ 3-4 ದಶಕಗಳಿಂದ ರೈತರ ಪರ ಹೋರಾಟಗಳನ್ನು ನಡೆಸುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಬಡವರ ಪರ ಕಣ್ಣೀರು ಒರೆಸುವ ಕೆಲಸವನ್ನು ಮಾಡಿದ್ದಾರೆ. ಸಿದ್ದರಾಮಯ್ಯ ಬಡವರ ಪರ, ರೈತರ ಪರ ಎಷ್ಟು ಹೋರಾಟಗಳನ್ನು ಮಾಡಿದ್ದಾರೆ ತಾಕತ್ತಿದ್ದರೆ ಹೇಳಲಿ. ಸಿದ್ದರಾಮಯ್ಯ ಒಬ್ಬ ಲಾಟರಿ ಮುಖ್ಯಮಂತ್ರಿ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರ ಆಡಳಿತ ಹೇಗಿದೆ ಎಂಬುದನ್ನು ಹಾದಿ ಬಿದಿಯಲ್ಲಿ ಜನ ಹಾದಿ ಹೋಗಳ್ತಿದ್ದಾರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ, ಸಿದ್ದರಾಮಯ್ಯ ಅವರ ಗ್ಯಾರಂಟಿಗಳ ಬಗ್ಗೆ ಮಂಗಳಾರತಿ ಮಾಡಿ ಕಳಿಸಿದ್ದಾರೆ. ಅದನ್ನು ಬಿಟ್ಟು ಮೋದಿ ಹಾಗೂ ಬಿಎಸ್ ವೈ ಅವರ ಬಗ್ಗೆ ಟೀಕೆ ಮಾಡುವುದು ನಾಚಿಕೆಗೇಡಿನ ಸಂಗತಿ. ಬೆಂಗಳೂರಿನಿಂದ ಬಳ್ಳಾರಿ ವರೆಗೆ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ದು, ಅಹಿಂದ ಬೆಳೆಸಿಕೊಳ್ಳಲು ಎಂದು ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!