ಹೊಸದಿಗಂತ ವರದಿ,ಹುಬ್ಬಳ್ಳಿ:
ದೇಶದ ಯಾವುದೇ ರಾಜ್ಯದ ಮುಖ್ಯಮಂತ್ರಿಗಳು ಹೇಳಿಕೊಳ್ಳುತ್ತಿಲ್ಲ. ಆದರೆ ಸಿದ್ದರಾಮಯ್ಯ ಅವರು ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಅಲೆದಾಡುವ ಪರಿಸ್ಥಿತಿ ಬಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನ ಹಂಚಿಕೆ ಕಾಂಗ್ರೆಸ್ ನ ಆತಂರಿಕ ವಿಚಾರವಾದರೂ ಸಹ ಒಪ್ಪಂದವಾಗಿಲ್ಲ ಎನ್ನುವ ಇವರಲ್ಲಿ ಯಾರೋ ಸುಳ್ಳು ಹೇಳುತ್ತಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಉತ್ತರ ನೀಡಬೇಕು ಎಂದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ್ ೧೫ ದಿನಕ್ಕೊಂದು ಬಾರಿ ಬಂದು ಏನು ಮಾಡಿ ಹೋಗುತ್ತಾರೆ ಗೊತ್ತಾಗಿಲ್ಲ. ಈ ಬಾರಿ ಚೀಟಿ ಬರೆದುಕೊಡಲು ಹೇಳುತ್ತಿದ್ದಾರೆ. ಶಾಸಕರ ಎಷ್ಟು ಜನರ ಸಹಕಾರವಿದೆ ಎಂಬುವುದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು. ರಾಜ್ಯದಲ್ಲಿ ಜನರಿಗೆ ಸುಳ್ಳು ಹೇಳುವುದು ಬಿಡಬೇಕು ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಮಾಡಿ ರಾಜ್ಯದ ಕೆಲವು ಯೋಜನೆ ಬಗ್ಗೆ ಚರ್ಚಿಸಿದ್ದಾರೆ. ರಾಜ್ಯದ ಹಿತಕ್ಕಾಗಿ ಏಕತೆ ಅವಶ್ಯಕ. ಆದರೆ ಮೊದಲು ರಾಜ್ಯದ ಸಿಎಂ ಹಾಗೂ ಡಿಸಿಎಂ ಏಕತೆಯಿಂದ ಆಡಳಿತ ನಡೆಸಲಿ. ನಾವು ರಾಜ್ಯದ ಹಿತಾಸಕ್ತಿಗೆ ಸಲುವಾಗಿ ನಾವು ಒಗ್ಗಟ್ಟಿನಿಂದ ಇರುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಜನ ಆಶೀರ್ವಾದ ಮಾಡಿದ್ದು, ಬಿಜೆಪಿಗೆ ಅದನ್ನು ಕೆಡಿಸುವ ಯೋಚನೆ ಇಲ್ಲ. ಸರ್ಕಾರ ಸರಿಯಾದ ರೀತಿಯಲ್ಲಿ ಆಡಳಿತ ನಡೆಸಲಿ. ೨೦೨೮ ಕ್ಕೆ ನಮಗೆ ಅವಕಾಶ ಸಿಗಲಿದೆ. ಸದ್ಯ ನಾವು ಸರ್ಕಾರ ಬಿಳಿಸುವ ಬಗ್ಗೆ ಯೋಚನೆ ಮಾಡಿಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಚುನಾವಣೆ ಮೂಲಕವೇ ಆಗಲಿದೆ. ಬಿ.ವೈ. ವಿಜಯೇಂದ್ರ ಉತ್ತಮ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಪರ್ವ ಆರಂಭವಾಗಿದೆ. ಈಗ ರಾಜ್ಯಾಧ್ಯಕ್ಷ ನೇಮಕ ಮಾಡಬೇಕು. ಚುನಾವಣೆ ಪ್ರಕ್ರಿಯೆ ರೂಪದಲ್ಲಿ ಆಯ್ಕೆ ಮಾಡಲಾಗುತ್ತದೆ. ಇನ್ನೂ ಮೂರುನಾಲ್ಕು ರಾಜ್ಯಗಳ ರಾಜ್ಯಾಧ್ಯಕ್ಷರ ಆಯ್ಕೆ ಮಾಡುವುದಿದೆ. ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ವರಿಷ್ಟರು ಸೂಚಿಸಿದ್ದು, ಹೇಳಿಕೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.