ಹೊಸದಿಗಂತ ವರದಿ,ವಿಜಯಪುರ:
ಮೈಸೂರು ಮಹಾರಾಜರು ತಮ್ಮ ಎಲ್ಲ ಒಡವೆ, ಬಂಗಾರವನ್ನು ಮಾರಿ ಕೃಷ್ಣ ರಾಜ ಸಾಗರ ಜಲಾಶಯ ಕಟ್ಟಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಏನಾರು ಮಾರಿದ್ದಾರಾ ?, ಇದ್ದ ಮೈಸೂರಿನಲ್ಲಿನ ಮುಡಾ ಪ್ಲಾಟ್ ಹೊಡೆದುಕೊಂಡು ಹೋಗಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
ನಾಲ್ವಡಿ ಕೃಷ್ಣರಾಜ್ ಒಡೆಯರ್‌ಗಿಂತಲೂ ಸಿದ್ದರಾಮಯ್ಯ ಅಭಿವೃದ್ಧಿ ಮಾಡಿದ್ದಾರೆ, ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಯ್ಯನವರ ಮಗ ತಿರಾ ಹಾದಿ ಬಿಟ್ಟು ಮಾತನಾಡುತ್ತಿದ್ದಾನೆ. ಏನೋ ಸ್ವಲ್ಪ ಶ್ಯಾಣ್ಯಾ ಅದಾನ ಅಂತಾ ತಿಳದುಕೊಂಡಿದ್ದೇವಿ. ನಿಮ್ಮಪ್ಪ ಗ್ಯಾರಂಟಿ ಮಾಡಿ ಕರ್ನಾಟಕ ದಿವಾವಳಿ ಮಾಡಿದ್ದಾನೆ ಎಂದು ಹರಿಹಾಯ್ದರು.
ಮೈಸೂರು ಮಹಾರಾಜರದ್ದು, ಆ ಭಾಗದಲ್ಲಿ ಸಾಕಷ್ಟು ಕೊಡುಗೆ ಇದೆ. ಅವರೊಟ್ಟಿಗೆ ಹೋಲಿಕೆ ಮಾಡಿ ಮಾತನಾಡುವುದು ಅಸಂಬದ್ಧ ಹೇಳಿಕೆಯಾಗಿದೆ ಎಂದರು.
ಸುರ್ಜೇವಾಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯಕ್ಕೆ ಸಂಭಂದ ಪಡದ, ಮಂತ್ರಿ ಅಲ್ಲದ, ಯಾವೂದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದ ವ್ಯಕ್ತಿ. ಒಂದು ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಬಂದು ಸಭೆ ಮಾಡುತ್ತಾರೆ.
ಕಲೆಕ್ಷನ್ ಸಲುವಾಗಿ ಸಭೆ ಮಾಡುತ್ತಿದ್ದಾರೆ. ಗ್ಯಾರಂಟಿ ಸಲುವಾಗಿ ಸರ್ಕಾರ ದಿವಾಳಿ ಆಗಿದೆ. ಬಡವರ ಮೇಲೆ ಜಿಎಸ್‌ಟಿ ಹಾಕಿ, ಕೇಂದ್ರ ಸರ್ಕಾರ ಅಂತಾ ಹೇಳ್ತಾರೆ ?, ಕೇಂದ್ರ ಸರ್ಕಾರ ಜಿಎಸ್‌ಟಿ ಹಾಕಿದ್ದರೆ ಇಡೀ ಭಾರತಕ್ಕೆ ಹಾಕಬೇಕಿತ್ತು, ಕರ್ನಾಟಕಕ್ಕೆ ಮಾತ್ರ ಯಾಕೆ ಹಾಕುತ್ತಾರೆ ಎಂದು ಪ್ರಶ್ನಿಸಿದರು.
ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಮುಂದೆ ಬರುವ ಚುನಾವಣೆಗಳಿಗೆ ಹಣ ಬೇಕಾಗಿದೆ. ಕರ್ನಾಟಕ ಬಿಟ್ಟರೆ ಅವರಿಗೆ ಸೋರ್ಸ್ ಯಾವೂದೂ ಇಲ್ಲ. ಇಂತಹ ದುರ್ದೈವದ ಆಡಳಿತ ನೋಡಿದರೆ ರಾಜ್ಯಪಾಲರ ಆಡಳಿತ ತರೋದು ಒಳ್ಳೆಯದು ಎಂದರು.
ಎಲ್ಲ ಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಯಾವಾಗ ತಮ್ಮ ಮಂತ್ರಿಸ್ಥಾನ ಹೋಗುತ್ತೋ ಅನ್ನೋ ಭಯದಲ್ಲಿದ್ದಾರೆ. ಕಾಂಗ್ರೆಸ್‌ನ ಎಲ್ಲ ಶಾಸಕರು ಅಸಮಧಾನಗೊಂಡಿದ್ದು, ಯಾರಿಗೂ ಸಮಾಧಾನ ಇಲ್ಲ ಎಂದರು.
ಸುರ್ಜೇವಾಲ್ ಸೂಪರ್ ಸಿಎಂ ವಿಚಾರಕ್ಕೆ, ಸುರ್ಜೇವಾಲಾ ಅಧಿಕಾರಿಗಳೊಟ್ಟಿಗೆ ಸಭೆ ಮಾಡಿ ಮಂತ್ರೀಗಳಿಗೆ ಎಷ್ಟೆಷ್ಟು ಕೊಟ್ಟಿದ್ದಾರೆ ಎಂದು ಕೇಳುತ್ತಿದ್ದಾರೆ. ಅದರ ಪ್ರಕಾರ ನಮಗೆ ಪರ್ಸೆಂಟೇಜ್ ಬಂದಿಲ್ಲ, ಎಂದು ಚೆಕ್ ಮಾಡುತ್ತಾರೆ. ಸೋನಿಯಾ ಗಾಂಧಿ ಹಾಗೂ ತಲೆ ಇಲ್ಲದ ರಾಹುಲ್ ಗಾಂಧಿಗೆ ಪರ್ಸೆಂಟೇಜ್ ಬಂದಿಲ್ಲ ಎಂದು ಅಧಿಕಾರಿಗಳೊಂದಿಗೆ ಸಭೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.