ಹೊಸದಿಗಂತ ವರದಿ, ವಿಜಯಪುರ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತಿತ್ತಲಾಗಿ ದಾರಿ ತಪ್ಪಿ ಮಾತನಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ದೂರಿದರು.
ಸಿದ್ದರಾಮಯ್ಯ ಚಡ್ಡಿ ಹೇಳಿಕೆ ಕುರಿತು ನಗರದಲ್ಲಿ ಅವರು ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್ ರಾಜಕೀಯ ಪಕ್ಷವಲ್ಲ. ಅದೊಂದು ಸ್ವಯಂ ಸೇವಕರ ಸಂಘ. ಭಾರತದ ಏಳ್ಗೆಗಾಗಿ, ಸಂಸ್ಕೃತಿ ಉಳಿಸಿ ಬೆಳೆಸೋದಕ್ಕಾಗಿ ಪೂರ್ವಾಶ್ರಮ ತೊರೆದು ಸಂಘದಲ್ಲಿ ವಾಸ ಮಾಡುತ್ತಾರೆ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಯಾರನ್ನೋ ಓಲೈಕೆ ಮಾಡೋದಕ್ಕೆ ಸಿದ್ದರಾಮಯ್ಯ ಮಾತಾಡೋದು ಸರಿಯಲ್ಲ ಎಂದರು.
ಸಿದ್ದರಾಮಯ್ಯ ಅನುಭವಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷದ ನಾಯಕ. ಆ ರೀತಿ ಮಾತನಾಡುವುದು ಸರಿಯಲ್ಲ ಎಂದರು.
ರೋಹಿತ್ ಚಕ್ರತೀರ್ಥ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಠ್ಯ ಪರಿಷ್ಕರಣಾ ಸಮಿತಿ ರದ್ದು ಮಾಡಿದ್ದಾರೆ. ಯಾವುದನ್ನು ಪರಿಷ್ಕರಣೆ ಮಾಡಬೇಕು ಅದನ್ನು ಮಾಡ್ತಾರೆ. ತಜ್ಞರ, ಶಿಕ್ಷಣ ಕ್ಷೇತ್ರದಲ್ಲಿರೋರು ಪರಿಶೀಲನೆ ಮಾಡುತ್ತಾರೆ ಎಂದರು.
ರಾಜ್ಯಸಭಾ ಚುನಾವಣೆಗೆ ಎರಡನೆ ಅಭ್ಯರ್ಥಿ ಕಾಂಗ್ರೆಸ್ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಗೆಲುತ್ತೀವಿ ಅಂತ ಹಾಕಿಲ್ಲ, ಒಳಜಗಳದಿಂದ ಅಭ್ಯರ್ಥಿ ಹಾಕಿದ್ದಾರೆ. ಮುಸ್ಲೀಮರಿಗೆ ಮೋಸ ಮಾಡಲು ಅದೊಂದು ಅಭ್ಯರ್ಥಿ ಹಾಕಿದ್ದಾರೆ. ಮುಸ್ಲಿಂ ಅಭ್ಯರ್ಥಿ ಗೆಲ್ಲಿಸುವ ಕಳಕಳಿ ಇದ್ದರೆ, ಮೊದಲನೇ ಅಭ್ಯರ್ಥಿ ಮುಸ್ಲಿಂ ಹಾಕಿ ಗೆಲ್ಲಿಸಬಹುದಿತ್ತು. ಸೋಲಲಿಕ್ಕೆ ಕಾಂಗ್ರೆಸ್ ಗೆ ಮುಸ್ಲಿಮರು ಬೇಕು.
ಬಲಿಕಾ ಬಕ್ರಾ ಮಾಡೋದಕ್ಕೆ ಮುಸ್ಲಿಮರು ಬೇಕು. ಗೆಲ್ಲೋದಕ್ಕೆ ಬೇರೆಯವರ ಬೇಕಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ವ್ಯಾಖ್ಯಾನಿಸಿದ್ದಾರೆ ಎಂದರು.
ದೇಶದಲ್ಲಿ 60 ವರ್ಷ ಆಡಳಿತದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ, ದಲಿತರ ಬಗ್ಗೆ ಕಾಳಜಿಯಿಟ್ಟು ಆಡಳಿತ ಮಾಡಿಲ್ಲ. ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದಾರೆ. ದಲಿತರು ದಲಿತಾರಾಗಿಯೇ ಇದ್ದಾರೆ. ಅಲ್ಪಸಂಖ್ಯಾತರು ಅಲ್ಪಸಂಖ್ಯಾತರಾಗಿಯೇ, ಬಡವರು ಬಡವರಾಗಿಯೇ ಉಳಿಯಬೇಕು ಅನ್ನೋದೇ ಕಾಂಗ್ರೆಸ್‌ನವರದಾಗಿದೆ ಎಂದು ಟೀಕಿಸಿದರು.