ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಕಾಂಗ್ರೆಸ್ ನಾಯಕರ ಆರೋಪಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮ ನಿಮ್ಮ ಅಧ್ಯಕ್ಷತೆಯಲ್ಲೇ ನಡೆಯಲಿ ಮತ್ತು ಭೌತಿಕವಾಗಿ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದಿದ್ದರೇ ವರ್ಚುವಲ್ ಮೂಲಕವಾದರೂ ಭಾಗವಹಿಸಿ ಎಂದು ಸಚಿವ ನಿತಿನ್ ಗಡ್ಕರಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಆಹ್ವಾನ ನೀಡಿದ್ದಾರೆ.
ಇಂದಿನ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ ಪತ್ರವನ್ನು ಟ್ವೀಟ್ ಮಾಡಿ, ಸ್ಪಷ್ಟನೆ ನೀಡಿದ್ದಾರೆ. ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಮೊದಲೇ ಅಧಿಕೃತವಾಗಿ ಆಹ್ವಾನ ನೀಡಲಾಗಿತ್ತು ಎಂದು ಬರೆದಿದ್ದಾರೆ.
ಇಂದಿನ ಕಾರ್ಯಕ್ರಮಕ್ಕೆ ಭೌತಿಕವಾಗಿ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 11 ರಂದು ಆಹ್ವಾನ ನೀಡಲಾಗಿದೆ. ಅಲ್ಲದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾವು ವಹಿಸುವಂತೆ ಕೋರಲಾಗಿದೆ. ಒಂದು ವೇಳೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೇ ವರ್ಚುವಲ್ ಮೂಲಕವಾದರೂ ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜುಲೈ 12 ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಹ್ವಾನಿಸಲಾಗಿತ್ತು ಎಂದು ಸಚಿವ ನಿತಿನ್ ಗಡ್ಕರಿ ಆಹ್ವಾನ ಪತ್ರ ಸಮೇತ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಸ್ಥಾಪಿತ ಶಿಷ್ಟಾಚಾರಗಳನ್ನು ಸದಾ ಎತ್ತಿಹಿಡಿದೆ. ನಾವು ಎಲ್ಲಿಯೂ ಶಿಷ್ಟಾಚಾರ ಉಲ್ಲಂಘನೆ ಮಾಡಿಲ್ಲ. ಮುಖ್ಯಮಂತ್ರಿಯವರ ಕೊಡುಗೆಗಳು ಮತ್ತು ಸಹಕಾರವನ್ನು ನಿರಂತರವಾಗಿ ಶ್ಲಾಘಿಸುತ್ತೇವೆ. ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳೊಂದಿಗೆ ನಿಕಟ ಸಮನ್ವಯಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.