ಹೊಸ ದಿಗಂತ ವರದಿ,ಚಿತ್ರದುರ್ಗ :
ಮುಡಾ ಹಗರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಆ ಮೂಲಕ ತನಿಖೆಗೆ ಸಹಕರಿಸಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ದಲಿತರ ಭೂಮಿಗೆ ಮುಖ್ಯಮಂತ್ರಿ ಅವರಿಗೆ ಪರಿಹಾರ ನೀಡಿರುವುದು ಇದೇ ಮೊದಲು. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಂತರಂಗದಲ್ಲಿ ಭ್ರಷ್ಟಾಚಾರ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾ ಅಂಬೇಡ್ಕರ್, ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಸಂವಿಧಾನಕ್ಕೆ ಗೌರವ ನೀಡುವುದಾದಲ್ಲಿ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅದನ್ನು ಬಿಟ್ಟು ಹಾದಿರಂಪ, ಬೀದಿರಂಪ ಮಾಡುವುದು ಸರಿಯಲ್ಲ. ಕಾನೂನು ಹೋರಾಟ ಮಾಡುವುದು ಬಿಟ್ಟು ಬೀದಿಯಲ್ಲಿ ಹೋರಾಟ ಮಾಡುವುದಲ್ಲ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದಲ್ಲಿ ನೀವು ಇನ್ನೊಬ್ಬ ಕೇಜ್ರಿವಾಲ್ ಆಗಲಿದ್ದೀರಿ ಎಂದು ಎಚ್ಚರಿಸಿದರು.
ದಲಿತರ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದೀರಿ. ಇದರ ಬದಲಾಗಿ ಗ್ಯಾರಂಟಿ ಹಣವನ್ನು ದಲಿತರ ಅಭಿವೃದ್ಧಿಗೆ ಏಕೆ ಬಳಸಿಲ್ಲ. ವಾಲ್ಮೀಕಿ ಅಭಿವೃದ್ಧೀ ನಿಗಮದ ೧೮೭ ಕೋಟಿ ರೂ. ಹಣವನ್ನು ದುರುಪಯೋಗ ಮಾಡಲಾಗಿದೆ. ಪರಿಶಿಷ್ಟ ಪಂಗಡದ ಜನರಿಗೆ ಭೂಮಿ ನೀಡಬೇಕಿದ್ದ, ಇತರೆ ಸೌಲಭ್ಯ ನೀಡಬೇಕಿದ್ದ ಹಣದಲ್ಲಿ ದದ್ದಲ್ ೧೦೦-೨೦೦ ಎಕರೆ ಜಮೀನು ಖರೀದಿಸಿದ್ದಾರೆ. ಸರ್ಕಾರದ ಖಜಾನೆಯ ಹಣವನ್ನು ಮದ್ಯ ಮಾರಾಟದ ಅಂಗಡಿಗಳಿಗೂ ಹಣ ವರ್ಗಾವಣೆ ಮಾಡಲಾಗಿದೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ೧೮೭ ಕೋಟಿ ರೂ ಅವ್ಯವಹಾರ ನಡೆದಿದೆ. ಆದರೂ ೮೭ ಕೋಟಿ ಮಾತ್ರ ಅವ್ಯವಹಾರ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಅವರನ್ನು ನಂಬಿದ್ದ ದಲಿತರಿಗೆ ವಿಶ್ವಾಸ ದ್ರೋಹ ಮಾಡಿದ್ದಾರೆ. ಮುಡಾ ಹಗರಣ ನಡೆದಿದ್ದರೂ ಅದು ತಪ್ಪೇ ಅಲ್ಲ. ಈ ಕುರಿತು ನಾನು ಯಾರಿಗೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಇರುವ ಇಂತಹ ಭಂಡ ಧೈರ್ಯ ಬೇರೆ ಯಾರಿಗೂ ಇಲ್ಲ ಎಂದು ಕಿಡಿಕಾರಿದರು.
ಕಳೆದ ೪೦ ವರ್ಷಗಳ ರಾಜಕೀಯ ಇತಿಹಾಸದಲ್ಲಿ ಹುಡುಕಿದರೂ ಒಂದು ಕಪ್ಪುಚುಕ್ಕೆ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈಗ ಭ್ರಷ್ಟಾಚಾರದಲ್ಲಿ ಮುಳುಗಿರುವ ಅವರು ಕಪ್ಪು ಕಾಗೆಯಂತಾಗಿದ್ದಾರೆ. ಇಷ್ಟು ಪ್ರಮಾಣದ ಕಪ್ಪು ಬಣ್ಣದಲ್ಲಿ ಕಪ್ಪುಚುಕ್ಕೆ ಹುಡುಕಲು ಸಾಧ್ಯವೇ ಎಂದು ವ್ಯಂಗ್ಯವಾಡಿದ ಅವರು, ಇನ್ನೂ ಒಂದು ಡಜನ್ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪವಿದೆ. ರಾಜ್ಯವನ್ನು ಎಟಿಎಂ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಬಗೆದಷ್ಟು ಬಯಲಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ಆತ್ಮಸಾಕ್ಷಿ ಇದ್ದಲ್ಲಿ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿರುವ ಕಾರಣ ಮನೆಗಳಿಗೆ ನೀರು ನುಗ್ಗಿ ಬಡವರ ಬದುಕು ನಾಶವಾಗಿದೆ. ನಷ್ಟ ಅನುಭವಿಸಿರುವ ಜನರಿಗೆ ಜಿಲ್ಲಾಡಳಿತ ಕೂಡಲೇ ಬಟ್ಟೆ-ಬರೆ, ಕಾಳು-ಕಡ್ಡಿ ಖರೀದಿಸಲು ೫೦ ಸಾವಿರ ರೂ. ಪರಿಹಾರ ನೀಡಬೇಕು. ಭಾಗಶಃ ಮನೆ ಕಳೆದುಕೊಂಡವರಿಗೆ ೩ ಲಕ್ಷ, ಪೂರ್ಣ ಮನೆ ಕಳೆದುಕೊಂಡವರಿಗೆ ೫ ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಿಡಿಲು ಬಡಿದು ಕುರಿ, ಮೇಕೆ, ಮತ್ತಿತರ ಜಾನುವಾರುಗಳು ಸಾವನ್ನಪ್ಪಿವೆ. ಇದರಿಂದ ಕರಿಗಾಹಿಗಳು, ಜಾನುವಾರು ನಂಬಿ ಜೀವನ ನಡೆಸುತ್ತಿರುವ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಸಂಪತ್‌ಕುಮಾರ್, ಸೌಭಾಗ್ಯ ಬಸವರಾಜನ್, ಭಾರ್ಗವಿ ದ್ರಾವಿಡ್, ದಗ್ಗೆ ಶಿವಪ್ರಕಾಶ್, ಚಲವಾದಿ ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.