ಹೊಸದಿಗಂತ ವರದಿ, ಹುಬ್ಬಳ್ಳಿ
ಬಿಜೆಪಿ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುತ್ತಿದೆ. ಅವರಿಗೆ ಜನರ ಬಳಿ ಹೋಗಲು ಯಾವುದೇ ಸಾಧನೆಗಳಿಲ್ಲ. ತಮ್ಮ ದೌರ್ಬಲ್ಯಗಳನ್ನು ಮರೆಮಾಚುವುದಕ್ಕೆ ಧಾರ್ಮಿಕ ವಿಚಾರಗಳನ್ನು ಎಳೆದು ತರುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಧರ್ಮದ ಹೆಸರು, ಆಹಾರ ಪದ್ಧತಿ ಮೇಲೆ ದಾರಿ ತಪ್ಪಿಸುತ್ತಿದ್ದಾರೆ. ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆ ಆಗಿದ್ದು, ಅದರ ಬಗ್ಗೆ ಏಕೆ ಮಾತಾಡುತ್ತಿಲ್ಲ. ಧರ್ಮದ ಹೆಸರಲ್ಲಿ ಜನರ ದಾರಿ ತಪ್ಪಿಸುತ್ತಿರುವುದೇ ಅವರಿಗೆ ತಿರುಗುಬಾಣವಾಗಲಿದೆ. ಈಗ ಮಸೀದಿಯಲ್ಲಿ ಮೈಕ್ ಬಳಸುವ ವಿಷಯ ತಂದಿದ್ದಾರೆ. ಮತಗಳ ಕ್ರೋಢೀಕರಣಕ್ಕೆ ಅವರು ಹೀಗೆ ಮಾಡುತ್ತಿದ್ದಾರೆ ಎಂದರು.
ರಾಜ್ಯದ ಗೃಹ ಸಚಿವರಿಗೆ ಅನುಭವವೇ ಇಲ್ಲ. ಅವರು ಗೃಹಸಚಿವರಾಗಿ ವಿಫಲರಾಗಿದ್ದಾರೆ. ಕೊಲೆ ಯಾರದ್ದೇ ಆಗಿದ್ದರೂ ನಾನು ಖಂಡಿಸುತ್ತೇನೆ. ಹಿಂದೂಗಳು ಸತ್ತರು ಜೀವ, ಮುಸ್ಲಿಮರು ಸತ್ತರು ಜೀವವೇ. ಶಿವಮೊಗ್ಗದಲ್ಲಿ ಹರ್ಷನನ್ನು ಕೊಂದವರನ್ನು ನೇಣಿಗೆ ಹಾಕಿ, ಜೀವಾವಧಿ ಶಿಕ್ಷೆ ಕೊಡಿಸಿ. ಅದೇ ರೀತಿ ಮುಸ್ಲಿಂ ಯುವಕರ ಹತ್ಯೆ ಮಾಡಿದವರಿಗೂ ಶಿಕ್ಷೆಯಾಗಲಿ. ಮೈಸೂರಲ್ಲಿ ಗ್ಯಾಂಗ್ ರೇಪ್ ಆದಾಗ ಗೃಹ ಸಚಿವರು ಯುವತಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಬೇಕಿತ್ತು ಅಂತ ಹೇಳಿಕೆ ಕೊಟ್ಟಿದ್ದರು. ಮುಖ್ಯಮಂತ್ರಿಗಳು ಗೃಹಸಚಿವರ ಹೇಳಿಕೆಗೆ ಅವರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ