ಹೊಸದಿಂತ ಡಿಜಿಟಲ್ ಡೆಸ್ಕ್:
ನನ್ನನ್ನು ಹಣಿಯಲು ಸಿದ್ದರಾಮಯ್ಯ ಷಡ್ಯಂತ್ರ ಮಾಡಿದ್ದು, ಈ ಹಿನ್ನೆಲೆಯಲ್ಲಿ ಇದೀಗ ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ನಾಪೋಕ್ಲುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಒಬ್ಬ ಬುದ್ಧಿವಂತ ತಂದೆ ಮಾತ್ರವಲ್ಲ ಬುದ್ದಿವಂತ ರಾಜಕಾರಣಿ ಕೂಡಾ. ಕೊಡಗು ಮೈಸೂರು ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿ ತನ್ನ ಪುತ್ರ ಯತ್ರಿಂದ್ರ ಗೆಲ್ಲಿಸಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ಅದಕ್ಕಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಈ ಷಡ್ಯಂತ್ರ ಫಲಿಸುವುದಿಲ್ಲ ಎಂದು ನುಡಿದರು.
ಮರ ಕಡಿದ ಪ್ರಕರಣದಲ್ಲಿ ಎಫ್ಐಆರ್ನಲ್ಲಿ ಹೆಸರಿಲ್ಲದಿದ್ದರೂ ನನ್ನ ತಮ್ಮನನ್ನು (ವಿಕ್ರಂ) ಬಂಧಿಸುವಂತೆ ಮಾಡಿದ್ದಾರೆ. ಮಾತ್ರವಲ್ಲದೆ ಮರ ಕಳ್ಳತನ ಪ್ರಕರಣದಲ್ಲಿ ಅಮಾನತಾದ ಅರಣ್ಯ ಅಧಿಕಾರಿಗಳನ್ನು ತನಿಖೆಗೆ ಬಿಟ್ಟು ವಿಚಾರಣೆ ಮಾಡಿಸುತ್ತಿದ್ದಾರೆ. ಮನೆಯಲ್ಲಿ ವೃದ್ಧ ತಾಯಿ, ತಂಗಿ ಇದ್ದಾಳೆ. ಅವರನ್ನೂ ಬಂಧನ ಮಾಡಿಸಲಿ. ನನ್ನ ತೇಜೋವಧೆ ಮಾಡಿದ್ದಾಯಿತು. ಈಗ ನನ್ನ ಕುಟುಂಬ ಮುಗಿಸಲು ಯತ್ನಿಸುತ್ತಿದ್ದಾರೆ ಎಂದ ಪ್ರತಾಪ್ ಸಿಂಹ, ಇದೆಂತಹ ದ್ವೇಷದ ರಾಜಕಾರಣ ಎಂದು ಪ್ರಶ್ನಿಸಿದರಲ್ಲದೆ, ಇದರಲ್ಲಿಯೇ ರಾಜ್ಯ ಸರ್ಕಾರ ತನ್ನ ಮೇಲೆ ದ್ವೇಷ ರಾಜಕೀಯ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದರು.
ಆದರೂ ಇದ್ಯಾವುದಕ್ಕೂ ಜಗ್ಗುವ ಮಗ ನಾನಲ್ಲ ಎಂದು ಗುಡುಗಿದ ಅವರು, ಕಾವೇರಿ ಮಾತೆ ಆಶೀರ್ವಾದ ಮತ್ತು ಕೊಡಗು ಮೈಸೂರು ಮತದಾರರ ನಂಬಿಕೆ ತನ್ನ ಮೇಲಿದೆ. ಹೀಗಾಗಿ ಅತ್ಯಧಿಕ ಮತಗಳಿಂದ ಗೆಲ್ಲುವೆ. ಇದು ಗೊತ್ತಿದ್ದೇ ತನ್ನ ವಿರುದ್ದ ಕಾಂಗ್ರೆಸ್ ಷಡ್ಯಂತ್ರ ಹೂಡಿ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್’ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಸಚಿವ ಮಧು ಬಂಗಾರಪ್ಪ ವಿರುದ್ದ 6.50 ಕೋಟಿ ಚೆಕ್ ಅಮಾನ್ಯ ಪ್ರಕರಣದಲ್ಲಿ ಶಿಕ್ಷೆ ಆಗಿದೆ. ಸಚಿವ ಮಧು ತಪ್ಪಿತಸ್ಥ ಎಂದು ಕೋರ್ಟ್ ಹೇಳಿದೆ. ಈ ಪ್ರಕರಣದ ಪ್ರಚಾರ ತಡೆಯಲು ನನ್ನ ತಮ್ಮನ ಪ್ರಕರಣಕ್ಕೆ ಸರಕಾರ ಗಮನ ನೀಡಿದೆ ಎಂದು ಟೀಕಿಸಿದರು.