Tuesday, November 25, 2025

ಹೈಕಮಾಂಡ್ ಆದೇಶ ಬಂದರೂ ಸಿದ್ಧರಾಮಯ್ಯ ರಾಜೀನಾಮೆ ಕೊಡಲ್ಲ: ಜಗದೀಶ್ ಶೆಟ್ಟರ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸರ್ಕಾರ ಒಳಗಿನ ಉದ್ವಿಗ್ನತೆಯೇ ಆಡಳಿತಕ್ಕೆ ದೊಡ್ಡ ಸವಾಲಾಗಿದ್ದು, ಹೈಕಮಾಂಡ್ ಸೂಚನೆ ಬಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಾನ ತ್ಯಜಿಸುವವರಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಹಂಬಲ ಮತ್ತು ಸಿದ್ದರಾಮಯ್ಯ-ಡಿಕೆ ನಡುವಿನ ಗುದ್ದಾಟದಿಂದಲೇ ಸರ್ಕಾರ ಪತನದ ಅಂಚಿನಲ್ಲಿದೆ ಎಂದು ಅವರು ತೀವ್ರ ಟೀಕೆ ನಡೆಸಿದರು.

ದೇವೇಗೌಡರು ಇತ್ತೀಚೆಗೆ ಮಾಡಿದ, “ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯ ಕಾರಣ” ಎನ್ನುವ ಹೇಳಿಕೆಗೆ ಬೆಂಬಲ ಸೂಚಿಸಿದ ಶೆಟ್ಟರ್, “ಅವರು ಅನುಭವಿಗಳಾದ ನಾಯಕರು, ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದಾಗಲೇ ಅವರನ್ನು ನೋಡಿದವರು. ಅವರ ಮಾತಿನಲ್ಲಿ ಸತ್ಯಾಂಶ ಇದೆ, ಅದಕ್ಕೆ ಸಿದ್ದರಾಮಯ್ಯನೇ ಉತ್ತರ ಕೊಡಬೇಕು” ಎಂದು ಕಟುವಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಅಧಿಕಾರದ ರಾಜಕಾರಣದಲ್ಲಿ ತಾನು ಅನೇಕ ಉದಾಹರಣೆಗಳನ್ನು ನೋಡಿದ್ದೇನೆ, ಕಾಂಗ್ರೆಸ್‌ಗೆ ಹೊಸಬರಾಗಿ ಬಂದವರೇ ಇಂದು ಪಕ್ಷದ ಮುಖ್ಯಸ್ಥರಾಗಿ ಕುಳಿತಿದ್ದಾರೆ ಎಂದು ಶೆಟ್ಟರ್ ಟೀಕಿಸಿದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯೇ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

error: Content is protected !!