ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ನಾನೇ ಸಿಎಂ, ನಾನೇ ಸಿಎಂ ಎಂದು ಹೇಳಿಕೊಳ್ಳುವ ದುಸ್ಥಿತಿ ಬಂದಿದೆ ಎಂಬ ಮಾತುಗಳಿಂದಲೇ ರಾಜ್ಯದ ಕಾಂಗ್ರೆಸ್ ಸರ್ಕಾರದ ಆಂತರಿಕ ಸ್ಥಿತಿ ಸ್ಪಷ್ಟವಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ದೌಡಾಯಿಸಿ ತಮ್ಮ ಸ್ಥಾನ ಉಳಿಸಿಕೊಳ್ಳುವ ಕಸರತ್ತು ಮಾಡುತ್ತಿರುವುದನ್ನು ಬಿಟ್ಟು ರಾಜ್ಯದ ಆಡಳಿತ ಸುಧಾರಣೆ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ವಿಚಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಜನತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯೇ ಸ್ಪಷ್ಟಪಡಿಸಬೇಕು ಎಂದು ಜೋಶಿ ಒತ್ತಾಯಿಸಿದರು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆ ಎಷ್ಟು ಶಾಸಕರ ಬೆಂಬಲವಿದೆ ಎಂಬುದನ್ನು ಸಿಎಂ ಸ್ಪಷ್ಟಪಡಿಸಬೇಕು ಎಂದೂ ಅವರು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ದೇಶದ್ರೋಹ ಪ್ರಕರಣಗಳು, ಜೈಲಿನಿಂದ ಭಯೋತ್ಪಾದಕರಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಗಂಭೀರ ಚಿಂತನೆ ವ್ಯಕ್ತಪಡಿಸಿದ ಜೋಶಿ, ಕರ್ನಾಟಕ ಈಗ ‘ಸ್ಲೀಪರ್ ಸೆಲ್’ಗೆ ತಾಣವಾಗುತ್ತಿದೆ ಎಂಬುದು ಆತಂಕಕಾರಿ ಬೆಳವಣಿಗೆ. ಇಂತಹ ಸಂದರ್ಭದಲ್ಲೂ ಸಿಎಂ ಆಗಿ ದೇಶದ್ರೋಹ ಚಟುವಟಿಕೆಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವ ಬದಲಿಗೆ ರಾಜಕೀಯ ಉಳಿವಿನ ಲೆಕ್ಕಾಚಾರದಲ್ಲಿ ತೊಡಗಿರುವುದು ಖಂಡನೀಯ ಎಂದು ಜೋಶಿ ವಾಗ್ದಾಳಿ ನಡೆಸಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಇತರೆ ರಾಜ್ಯಗಳಂತೆಯೇ ಕರ್ನಾಟಕದಲ್ಲೂ ಚುನಾವಣೆ ಪ್ರಕ್ರಿಯೆ ಮೂಲಕಲೇ ಅಧ್ಯಕ್ಷ ಆಯ್ಕೆ ನಡೆಯಲಿದೆ ಎಂದು ಜೋಶಿ ಸ್ಪಷ್ಟಪಡಿಸಿದರು. ಬಿ.ವೈ ವಿಜಯೇಂದ್ರ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದುವರಿಸಬೇಕೆಂಬ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ ಎಂದರು.