ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪೂರ್ಣಾವಧಿಗೆ ನಾನೇ ಸಿಎಂ ಆಗಿ ಮುಂದುವರಿಯುವ ವಿಶ್ವಾಸವಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು,ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ, ಐ ವಿಶ್ ಹಿಮ್ ಆಲ್ ದ ಬೆಸ್ಟ್. ಗುಡ್ ಲಕ್” ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ದೀರ್ಘಾವಧಿ ಆಡಳಿತ ಮಾಡಿದ ದಾಖಲೆ ಬರೆಯುತ್ತಿದ್ದಾರೆ ಎಂದು ಕೇಳಿದಾಗ, ʼಇದು ಬಹಳ ಸಂತೋಷದ ವಿಷಯ. ನಮಗೆ, ನಿಮಗೆ ಎಲ್ಲರಿಗೂ ಸಂತೋಷದ ವಿಚಾರ. ನೀವು ಈ ಬಗ್ಗೆ ಉತ್ತಮವಾಗಿ ಪ್ರಚಾರ ಮಾಡಿ. ನಾನು ಅವರಿಗೆ ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ. ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ನಮ್ಮ ಮುಖ್ಯಮಂತ್ರಿಗಳು ಇತಿಹಾಸದ ಪುಟಕ್ಕೆ ಹಿಂದೆಯೂ ಸೇರಿದ್ದಾರೆ, ಮುಂದೆಯೂ ಸೇರುತ್ತಾರೆʼ ಎಂದು ತಿಳಿಸಿದರು.
ಇದರಿಂದ ನಿಮ್ಮ ಹಾದಿ ಸುಗಮವಾಗುತ್ತದೆಯೇ ಎಂದು ಕೇಳಿದಾಗ, ʼಹಳ್ಳಿಯಿಂದ ಬಂದ ನಾನು ಇಲ್ಲಿಯವರೆಗೂ ತಲುಪಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ನನಗೆ. ಯಾವುದನ್ನೂ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ನನ್ನ ಬಾಯಲ್ಲಿ ಏನೇನೋ ಮಾತನಾಡಿಸಲು ಪ್ರಯತ್ನಿಸಬೇಡಿʼ ಎಂದರು.

