ಅದ್ದೂರಿಯಾಗಿ ನಡೆಯಿತು ಸಿದ್ಧಾರೂಢ ಸ್ವಾಮೀಜಿ ಮಹಾರಥೋತ್ಸವ

ಹೊಸ ದಿಗಂತ ವರದಿ, ಹುಬ್ಬಳ್ಳಿ:

ಉತ್ತರ ಕರ್ನಾಟಕ ಆರಾಧ್ಯ ದೈವವಾದ ನಗರದ ಸಿದ್ಧಾರೂಢ ಸ್ವಾಮೀಜಿ ಮಹಾರಥೋತ್ಸವ ಅಸಂಖ್ಯಾ ಭಕ್ತ ಸಾಗರದ ಮಧ್ಯೆ ಗುರುವಾರ ಅದ್ಧೂರಿಯಾಗಿ ನಡೆಯಿತು.

ಸಂಜೆ ೫.೩೦ರ ಹೊತ್ತಿಗೆ ಮಠದ ಆವರಣಕ್ಕೆ ಸಿದ್ಧಾರೂಢರು ಮತ್ತು ಗುರುನಾಥಾರೂಢರ ಪಲ್ಲಕ್ಕಿ ಬರುತ್ತಿದ್ದಂತೆ ರಥೋತ್ಸವಕ್ಕೆ ಚಾಲನೆ ದೊರಿಯಿತು.

ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ರಥದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ರಥೋತ್ಸವದ ಹಾದಿಯುದ್ದಕ್ಕೂ ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ…ಸಿದ್ಧಾರೂಢಸ್ವಾಮಿ ಮಹಾರಾಜ್ ಕಿ ಜೈ… ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ… ಶಿವಾಯ ನಮಃ.. ಓಂ ನಮಃ ಶಿವಾಯ… ಹೀಗೆ ಅಜ್ಜನ ಸ್ಮರಿಸುತ್ತಿದ್ದ ಭಕ್ತರ ಘೋಷಣೆ ಹಾಕಿದರು.

ಕಾರವಾರ ರಸ್ತೆಗೆ ಹೊಂದಿಕೊಂಡಂತಿರುವ ಮಠದ ಪ್ರವೇಶ ಗೋಪುರದವರೆಗೆ ಸಾಗಿದ ರಥ ಮರಳಿ ಮಠದ ಆವರಣವನ್ನು ಬಂದು ತಲುಪಿತು. ರಥಕ್ಕೆ ಉತ್ತುತ್ತಿ, ಬಾಳೆ ಹಣ್ಣು ಹಾಗೂ ನಿಂಬೆ ಹಣ್ಣು ಎಸೆದು ಸಂಭ್ರಮಿಸಿದರು.

ರಥದ ಹಾದಿಯುದ್ದಕ್ಕೂ ಹೆಜ್ಜೆಮೇಳ, ಡೊಳ್ಳು ಕುಣಿತ, ಹಲಗಿ ಬಡಿತದ ಜನಪದ ಕಲಾತಂಡಗಳು ಜತ್ರೆಗೆ ವಿಶೇಷ ಮೆರಗು ತಂದವು. ಎಲ್ಲರ ಬಾಯಲ್ಲೂ ಶಿವಾಯ ನಮಃ ಸ್ಮರಣೆ ಕೇಳಿ ಬರುತ್ತಿತ್ತು. ಬೆಳಿಗ್ಗೆ ಯಿಂದ ಸಂಜೆ ವರೆಗೆ ಮಠದಲ್ಲಿ ವಿಶೇಷ ಪೂಜೆ, ಭಜನೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಪೊಲೀಸ್ ಬಂದೋಬಸ್ತ ನಿಯೋಜಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!