ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ನಿರ್ಮಾಣ ಮಾಡಲಾಗಿರುವ ಸೇತುವೆಗೆ ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ ಎಂದು ನಾಮಕರಣ ಮಾಡಲಾಗಿದೆ ಎಂದು ಸಚಿವ ನಿತಿನ್ ಗಡ್ಕರಿ ಘೋಷಿಸಿದರು.
ಸಾಗರ ಪಟ್ಟಣದ ನೆಹರು ಮೈದಾನದಲ್ಲಿ ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ದೇಶಿಸಿ ಸಚಿವ ನಿತಿನ್ ಗಡ್ಕರಿ ಮಾತನಾಡಿದರು. ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ ನಿರ್ಮಾಣಕ್ಕೆ ನಾನೇ ಭೂಮಿಪೂಜೆ ಮಾಡಿದ್ದೆ. ಇದೀಗ, ನಾನೇ ಉದ್ಘಾಟನೆ ಮಾಡಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನೂತನ ಹೆದ್ದಾರಿ ನಿರ್ಮಾಣ ಮಾಡಿದ್ದೇವೆ. ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗ-ತುಮಕೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಹುಬ್ಬಳ್ಳಿ-ಧಾರವಾಡ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಪೂರ್ಣ ಆಗಲಿದೆ ಎಂದು ತಿಳಿಸಿದರು.
5000 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಗುರಿ ಹೊಂದಿದ್ದೇವೆ. 1300 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹಾಸನದಿಂದ ರಾಯಚೂರಿಗೆ ಸಂಪರ್ಕ ಕಲ್ಪಿಸುವ ನಾಲ್ಕು ಲೈನ್ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಇದರಿಂದ ಪ್ರಯಾಣದ ಸಮಯ ಅರ್ಧದಷ್ಟು ಕಡಿಮೆಯಾಗಲಿದೆ. ಬೆಂಗಳೂರು-ಚೆನೈ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ ಎಂದರು.
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಿಂಗ್ ರೋಡ್ ಕಾಮಗಾರಿ ನಡೆಯುತ್ತಿದೆ. ಶೇ 40 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರದಲ್ಲೇ ಉಳಿದ ಕಾಮಗಾರಿಯೂ ಪೂರ್ಣಗೊಳ್ಳಲಿದೆ ಎಂದರು.