ಹೊಸದಿಗಂತ ವರದಿ,ಮುಂಡಗೋಡ:
ತಾಲೂಕಿನ ಹುಲಿಹೊಂಡ ಗ್ರಾಮದ ಹತ್ತಿರ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದು, ಕಬ್ಬು ಕಟಾವು ಮಾಡಲು ಹೋಗಿದ್ದ ಕಾರ್ಮಿಕರು ಭಯದಿಂದ ಕಬ್ಬು ಕಟಾವು ಮಾಡದೇ ಮರಳಿದ ಘಟನೆ ಬೆಳಕಿಗೆ ಬಂದಿದೆ.
ರೈತ ಶಿವಾನಂದ ಕೆಂಗಾಪುರ ಎಂಬುವರ ಗದ್ದೆಯಲ್ಲಿದ್ದ ಕಬ್ಬನ್ನು ಕಟಾವು ಮಾಡುತ್ತಿದ್ದಾಗ ಎರಡು ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಚಿರತೆ ಮರಿಗಳನ್ನು ಕೈಯಲ್ಲಿ ಎತ್ತಿಕೊಂಡು ಅನತಿ ದೂರದಲ್ಲಿ ಇಟ್ಟಿದ್ದಾರೆ. ಕಟಾವು ಮಾಡಿದ ಕಬ್ಬನ್ನು ಲಾರಿಗೆ ತುಂಬುವಾಗ ತಾಯಿ ಚಿರತೆಯು ಕಾರ್ಮಿಕರ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿದೆ. ಆತಂಕಗೊಂಡ ಕಾರ್ಮಿಕರು ಲಾರಿ ಏರಿ ಜೀವ ಉಳಿಸಿಕೊಂಡಿದ್ದಾರೆ.
ಜ.೧೨ರಂದು ಚಿರತೆ ಮರಿ ಪ್ರತ್ಯಕ್ಷವಾಗಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ರೈತರಿಂದ ಕೇಳಿಬರುತ್ತಿದೆ. ಮರಿಗಳನ್ನು ಸನಿಹದ ಕಬ್ಬಿನ ಗದ್ದೆಗೆ ಮತ್ತೆ ಕರೆದುಕೊಂಡು ಹೋಗಿರುವ ತಾಯಿ ಚಿರತೆಯು, ಮಂಗಳವಾರ ರಾತ್ರಿ ಟಾರ್ಚ್ ಬೆಳಕಿಗೆ ಮುಖ ಮಾಡಿ ಚೀರುತ್ತ ಬಂದಿದೆ. ಬುಧವಾರ ಅರಣ್ಯ ಸಿಬ್ಬಂದಿ ಗದ್ದೆಗೆ ಭೇಟಿ ನೀಡಿ, ಚಿರತೆಯ ಚಲನವಲನ ವೀಕ್ಷಿಸಿದರು. ಕಬ್ಬಿನ ಗದ್ದೆಯಲ್ಲಿಯೇ ಚಿರತೆ ತನ್ನ ಮರಿಗಳೊಂದಿಗೆ ಬಿಡಾರ ಹೂಡಿದ್ದರಿಂದ ಕಬ್ಬು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಎರಡು ಚಿರತೆ ಮರಿಗಳು ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾಗಿದ್ದವು. ಮಾರನೇ ದಿನ ಮರಿಗಳನ್ನು ಮತ್ತೊಂದು ಕಬ್ಬಿನ ಹದ್ದೆಗೆ ಕರೆದುಕೊಂಡು ಹೋಗಿದೆ. ಕಬ್ಬು ಕಟಾವು ಮಾಡುವಾಗ ಚಿರತೆ ದಾಳಿ ಮಾಡಿದ್ದರಿಂದ ಆತಂಕಗೊಂಡ ಕೂಲಿ ಕಾರ್ಮಿಕರು ಕಬ್ಬನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ’ ಎಂದು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಹನಮಂತ ಕಂಬಾರ ಹೇಳಿದರು.
ಚಿರತೆಯ ಮರಿಗಳು ಕಬ್ಬಿನ ಗದ್ದೆಯಲ್ಲಿ ಕಳೆದ ಐದು ದಿನಗಳ ಹಿಂದೆ. ಆದರೆ ಈ ವಿಷಯ ಯಾರಿಗೂ ಗೊತ್ತಾಗಬಾರದು ಎಂಬ ಉದ್ದೇಶದಿಂದ ವಲಯ ಅರಣ್ಯಧಿಕಾರಿಗಳು ಗ್ರಾಮದ ಯುವಕರಲ್ಲಿದ್ದ ಮತ್ತು ಸಿಬ್ಬಂದಿ ಕಡೆಯಲ್ಲಿದ್ದ ಪೋಟೋ ಹಾಗೂ ವಿಡಿಯೊ ಡೀಲಟ್ ಮಾಡಿಸಿದರು ಎಂದು ಅರಣ್ಯ ಇಲಾಖೆಯ ಸಿಬ್ವಂದಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿನ ಎಸಿಎಫ್ ರವಿ ಹುಲಿಕೋಟಿ ಮಾಹಿತಿ ತಿಳಿದು ಬುಧವಾರ ಹುಲಿಹೊಂಡ ಗ್ರಾಮಕ್ಕೆ ಭೇಟಿ ನೀಡಿ, ಈ ಮರಿ ಚಿರತೆಗಳನ್ನು ತಾಯಿ ಕರೆದುಕೊಂಡು ಹೋಗಿದೆ ಎಂದು ತಿಳಿದಿದ್ದೆ. ರೈತರ ಕಬ್ಬು ಕಟಾವು ಮಾಡಲು ಮೊದಲ ಆದ್ಯತೆ ನೀಡಲಾಗುವುದು. ಮರಿಗಳ ಜೊತೆಗೆ ಚಿರತೆ ರಕ್ಷಣೆ ಮಾಡಲು ಅರಣ್ಯ ಸಿಬ್ಬಂದಿಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುವುದು. ಹಲಗೆ ಬಾರಿಸುವುದು, ಪಟಾಕ್ಷಿ ಹೊಡೆಯುವುದು ಮತ್ತು ತುಮ್ಮಿಂಗ್ ಕಾರ್ಯಚರಣೆ ಮಾಡಲಾಗುವುದು. ಅಗತ್ಯಬಿದ್ದರೆ ಬೋನ್ ಇಟ್ಟು ಚಿರತೆ ಸೇರಿ ಹಿಡಿಯಲಾಗುವುದು. ಚಿರತೆ ಕಾಣಿಸಿಕೊಂಡ ಗದ್ದೆಗೆ ಮಹಿಳೆಯರು ಮತ್ತು ಮಕ್ಕಳು ಕೆಲಸಕ್ಕೆ ಬರಬಾರದು. ಕಟಾವು ಮಾಡುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇರಬೇಕು. ಇದರ ಜೊತೆ ನಮ್ಮ ಸಿಬ್ಬಂದಿಗಳು ಕಾರ್ಯಚರಣೆ ನಡೆಸುತ್ತಾರೆ ಎಂದು ರೈತರಿಗೆ ಭರವಸೆ ನೀಡಿದರು