ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಲೋಕಸಭಾ ಚುನಾವಣೆಯಲ್ಲಿ ಬದ್ಧ ವೈರಿಯಾಗಿದ್ದ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಭೇಟಿಯಾಗಿದ್ದಾರೆ.
ರಾಜಕಾರಣದಲ್ಲಿ ಯಾರೂಬ್ಬರೂ ಶಾಶ್ವತ ವೈರಿಗಳಲ್ಲ, ಯಾರೂ ಶಾಶ್ವತ ಸ್ನೇಹಿತರಲ್ಲ ಎಂಬ ಮಾತು ಇಲ್ಲಿ ನಿಜವಾಗುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಿದ್ದರು. ಈ ವೇಳೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಸುಮಲತಾ ಜೆಡಿಎಸ್‌ನ ಬದ್ಧ ವೈರಿಯಾಗಿದ್ದು, ಕೊನೆಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿಸಿದ ಸುಮಲತಾ ಅವರನ್ನು ಮಂಡ್ಯ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬೆಂಬಲಿಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಅವರು ಸಂಸದೆ ಸುಮಲತಾ ಅವರ ಮನೆಗೆ ತೆರಳುತ್ತಿದ್ದಂತೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಸ್ವಾಗತ ಮಾಡುತ್ತಾರೆ. ನಂತರ, ಮನೆಯೊಳಗೆ ಹೋದ ನಂತರ ಸಂಸದೆ ಸುಮಲತಾ ಅವರು ಹೂಗುಚ್ಛ ನೀಡಿ ಕುಮಾರಸ್ವಾಮಿ ಅವರನ್ನು ಸ್ವಾಗತಿಸುತ್ತಾರೆ. ಈ ವೇಳೆ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರೂ ಕೂಡ ಹಾಜರಿದ್ದರು.