Thursday, January 8, 2026

ಬೀದಿ ನಾಯಿಗಳ ಕುರಿತು ‘ಸುಪ್ರೀಂ’ ಮಧ್ಯಂತರ ತೀರ್ಪಿಗೆ ವಿರೋಧ: ಪ್ರಾಣಿ ಪ್ರಿಯರಿಂದ ಮೌನ ಪ್ರತಿಭಟನೆ

ಹೊಸದಿಗಂತ ವರದಿ, ಮಂಗಳೂರು

ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಸಿದಂತೆ ಸುಪ್ರೀಂ ಕೋರ್ಟ್‌ನ ಮಧ್ಯಂತರ ತೀರ್ಪು ವಿರೋಧಿಸಿ ಪ್ರಾಣಿ ಪ್ರಿಯರಿಂದ ‘ಮಾಡು ಅಥವಾ ಮಡಿ- ಒಂದು ದಿನ ಒಂದು ಧ್ವನಿ ಒಂದು ಹೋರಾಟ’ ಮೌನ ಪ್ರತಿಭಟನೆ ಮಂಗಳೂರು ನಗರದ ಮಿನಿ ವಿಧಾನ ಸೌಧದ ಬಳಿ ಭಾನುವಾರ ನಡೆಯಿತು.

ಪ್ರಾಣಿ ಸಂರಕ್ಷಣೆಗೆ ಸಂಬಂಧಿಸಿದ ಭಿತ್ತಿಪತ್ರಗಳನ್ನು ಹಿಡಿದ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬೀದಿಯಲ್ಲಿರುವ ನಾಯಿ ಹಾಗೂ ಇತರ ಪ್ರಾಣಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿದರು. ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಪ್ರಾಣಿ ಕಲ್ಯಾಣ ಸಂಸ್ಥೆಗಳು ಸಲ್ಲಿಸಿದ ಹಸ್ತಕ್ಷೇಪ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಬೇಕು. ಬೀದಿ ನಾಯಿಗಳ ಸಂಖ್ಯೆ ಕಡಿಮೆ ಮಾಡಲು ವೈಜ್ಞಾನಿಕ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಅನುಸರಿಸಬೇಕು. ಅದಕ್ಕಾಗಿ ಪ್ರಾಣಿ ಸಂತಾನ ನಿಯಂತ್ರಣ ಕೇಂದ್ರಗಳನ್ನು ತೆರೆಯಬೇಕು. ಮಂಗಳೂರಿನಲ್ಲಿ ಈಗಾಗಲೇ ವ್ಯವಸ್ಥಿತವಾಗಿ ಇಂತಹ ಕೇಂದ್ರವು ಕಾರ್ಯಾಚರಿಸುತ್ತಿದೆ. ಮಂಗಳೂರಿನಲ್ಲಿ ಇಂತಹ ಕನಿಷ್ಟ ಇನ್ನೆರಡು ಕೇಂದ್ರಗಳ ಅಗತ್ಯವಿದೆ. ಸಾಕು ಪ್ರಾಣಿಗಳಿಗೆ ನೋಂದಣಿ, ಸಂತಾನಹರಣ ಚಿಕಿತ್ಸೆ ಮತ್ತು ಲಸಿಕೆಗಳನ್ನು ಕಡ್ಡಾಯಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಅನಿಮಲ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಸುಮಾ ನಾಯಕ್, ಪ್ರಾಣಿ ಸಂರಕ್ಷಕರಾದ ರಜನಿ ಶೆಟ್ಟಿ, ಹರೀಶ್ ರಾಜಕುಮಾರ್, ದಿನೇಶ್ ಪೈ, ಡಾ. ಶ್ರುತಿ ರಾವ್, ಚಾರ್ಲ್ಸ್, ಪಶು ಶಸ್ತ್ರ ಚಿಕಿತ್ಸಕರಾದ ಡಾ. ಯಶಸ್ವೀ ರಾವ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

error: Content is protected !!