ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ತಿಂಗಳುಗಳಿಂದ ಕಳಪೆ ವಾಯು ಗುಣಮಟ್ಟದಿಂದ ಕಂಗಾಲಾಗಿದ್ದ ಬೆಂಗಳೂರಿಗರಿಗೆ ಇಂದು ಅಲ್ಪ ಸಮಾಧಾನದ ಸುದ್ದಿ ಸಿಕ್ಕಿದೆ. ರಾಜ್ಯದಾದ್ಯಂತ ವಾಯು ಮಾಲಿನ್ಯದ ಮಟ್ಟ ಆತಂಕಕಾರಿಯಾಗಿದ್ದರೂ, ರಾಜಧಾನಿ ಬೆಂಗಳೂರಿನಲ್ಲಿ ಇಂದು ಗಾಳಿಯ ಗುಣಮಟ್ಟದಲ್ಲಿ ಸಣ್ಣ ಮಟ್ಟಿನ ಸುಧಾರಣೆ ಕಂಡುಬಂದಿದೆ.
ಕೆಲವು ತಿಂಗಳ ಹಿಂದೆ ನಗರದ ವಾಯು ಗುಣಮಟ್ಟ ಸೂಚ್ಯಂಕ 200ರ ಗಡಿ ದಾಟಿ ಆತಂಕ ಸೃಷ್ಟಿಸಿತ್ತು. ಆದರೆ ಇಂದು ಬೆಂಗಳೂರಿನಲ್ಲಿ AQI ಮಟ್ಟ 144 ದಾಖಲಾಗಿದೆ. ಕಳೆದ 2-3 ತಿಂಗಳಿಗೆ ಹೋಲಿಸಿದರೆ ಇದು ಸುಧಾರಿತ ಮಟ್ಟವೆಂದು ಪರಿಗಣಿಸಲಾಗಿದ್ದರೂ, ಇದು ಸಂಪೂರ್ಣ ಸುರಕ್ಷಿತವೇನಲ್ಲ.
ಗಾಳಿಯ ಗುಣಮಟ್ಟದಲ್ಲಿ ಅಲ್ಪ ಚೇತರಿಕೆ ಕಂಡಿದ್ದರೂ, ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷತಾ ಮಾನದಂಡಗಳಿಗಿಂತ 5 ಪಟ್ಟು ಹೆಚ್ಚು ಸೂಕ್ಷ್ಮ ಕಣಗಳು (PM 2.5) ನಮ್ಮ ಗಾಳಿಯಲ್ಲಿವೆ. ಇದು ಕೇವಲ ಅಂಕಿ-ಅಂಶಗಳ ಆಟವಲ್ಲ; ಬದಲಾಗಿ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಗಂಭೀರ ಕಾಯಿಲೆಗಳಿಗೆ ನೇರ ಆಹ್ವಾನ ನೀಡುತ್ತಿದೆ.
ಒಟ್ಟಾರೆಯಾಗಿ, ನಗರದ ಗಾಳಿ ಇಂದು ಸ್ವಲ್ಪ ಮಟ್ಟಿಗೆ ತಿಳಿಯಾದಂತೆ ಕಂಡರೂ, ಆರೋಗ್ಯದ ದೃಷ್ಟಿಯಿಂದ ಇನ್ನೂ ‘ಕಳಪೆ’ ಮಟ್ಟದಲ್ಲೇ ಇದೆ. ಸಾರ್ವಜನಿಕರು ಮಾಸ್ಕ್ ಧರಿಸುವುದು ಮತ್ತು ಮಾಲಿನ್ಯ ತಡೆಗೆ ಸಹಕರಿಸುವುದು ಇಂದಿನ ಅಗತ್ಯವಾಗಿದೆ.




