ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ಶಿವಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೋಡಿ ಚಿರತೆಗಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಸುತ್ತಲಿನ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಗೆ ಪತ್ರ ಬರೆದು ಚಿರತೆಗಳನ್ನು ಹಿಡಿಯುವಂತೆ ಮನವಿ ಮಾಡಿದ್ದಾರೆ.
ನಗರದ ಕಾಳೇನಹಳ್ಳಿಯಲ್ಲಿ ಜೋಡಿ ಚಿರತೆಗಳು ಮನೆ ಮುಂದೆ ಬಂದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬಳಿಕ ಮಾವಳ್ಳಿಪುರದ ರಸ್ತೆಯಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ಹೊಟ್ಟೆ ಹಸಿದಾಗ ಬೀದಿನಾಯಿಗಳನ್ನು ಎಳೆದೊಯ್ದು ತಿಂದಿದ್ದಾವೆ. ಶಿವಕೋಟೆ ಗ್ರಾಮ ಪಂಚಾಯತಿಯ ರಾಮಗೊಂಡನಹಳ್ಳಿ, ಕಾಳೇನಹಳ್ಳಿ ಹಾಗೂ ಮಾವಳ್ಳಿಪುರ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿವೆ.
2 ದಿನಗಳಿಂದ ಜೋಡಿ ಚಿರತೆ ಓಡುತ್ತಿದ್ದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಚಿರತೆಗಳ ಹೆಜ್ಜೆ ಗುರುತು ಸಹ ಗದ್ದೆಗಳಲ್ಲಿ ಪತ್ತೆಯಾಗಿವೆ. ಜನರು ಪತ್ರ ಬರೆದು ಚಿರತೆ ಹಿಡಿಯುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳನ್ನ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಬೋನ್ ಒಳಗೆ ಮೇಕೆಯನ್ನು ಕಟ್ಟಿದ್ದು ಚಿರತೆ ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ರಾತ್ರಿ ಸಮಯದಲ್ಲಿ ಕಾಣಿಸಿಕೊಂಡ ಚಿರತೆಗಳು ಮತ್ತೆ ಕಾಣಿಸುತ್ತಿಲ್ಲ. ಇದರಿಂದ ಅಲ್ಲಿನ ಜನರು ಆತಂಕದಲ್ಲೇ ಓಡಾಡುತ್ತಿದ್ದಾರೆ.