ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹಲವರು ಉಪವಾಸ ವ್ರತ ಆಚರಿಸುತ್ತಾರೆ. ಈ ಸಮಯದಲ್ಲಿ ದಿನವಿಡೀ ಹಸಿವನ್ನು ನಿಯಂತ್ರಿಸುವುದರ ಜೊತೆಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುವಂತೆ ಆಹಾರ ಸೇವಿಸುವುದೂ ಮುಖ್ಯ. ಪ್ರತಿದಿನ ಒಂದೇ ರೀತಿಯ ತಿಂಡಿ ತಿನ್ನುವ ಬದಲು, ರುಚಿಕರವಾದ ಮತ್ತು ಸಾತ್ವಿಕ ಖಾದ್ಯಗಳನ್ನು ಸೇರಿಸಿ ನವರಾತ್ರಿ ಸ್ಪೆಷಲ್ ಥಾಲಿ ತಯಾರಿಸಬಹುದು.

ಸಾಬುದಾನ ಖಿಚಡಿ
ಸಾಬುದಾನ – 1 ಕಪ್
ಹುರಿದ ಕಡಲೆಕಾಯಿ – ¼ ಕಪ್
ಹಸಿಮೆಣಸು – 1–2
ಜೀರಿಗೆ – ½ ಚಮಚ
ತುಪ್ಪ ಅಥವಾ ಎಣ್ಣೆ – 1–2 ಚಮಚ
ಕೊತ್ತಂಬರಿ ಸೊಪ್ಪು – ಅಗತ್ಯಕ್ಕೆ ತಕ್ಕಷ್ಟು
ನಿಂಬೆ ರಸ – ಸ್ವಲ್ಪ
ಮಾಡುವ ವಿಧಾನ:
ಮೊದಲು ಸಾಬುದಾನವನ್ನು ತೊಳೆದು,ನೀರಿನಲ್ಲಿ 4–6 ಗಂಟೆಗಳ ಕಾಲ ನೆನೆಸಿಡಿ. ನೀರನ್ನು ಸಂಪೂರ್ಣವಾಗಿ ಬಸಿದುಕೊಳ್ಳಿ.
ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ, ಹಸಿಮೆಣಸು ಮತ್ತು ಪುಡಿ ಮಾಡಿದ ಕಡಲೆಕಾಯಿಯನ್ನು ಹುರಿಯಿರಿ. ನಂತರ ಸಾಬುದಾನ ಸೇರಿಸಿ ನಿಧಾನವಾಗಿ ಬೇಯಿಸಿ. ಕಾಳುಗಳು ಪಾರದರ್ಶಕವಾಗುತ್ತಿದ್ದಂತೆ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಬಿಸಿಬಿಸಿಯಾಗಿ ಬಡಿಸಿ.

ಆಲೂ ಟೊಮೆಟೊ ಸಬ್ಜಿ
ಆಲೂಗಡ್ಡೆ – 2
ಟೊಮೆಟೊ – 2
ಹಸಿಮೆಣಸು – 1
ಜೀರಿಗೆ – ½ ಚಮಚ
ತುಪ್ಪ – 1 ಚಮಚ
ಉಪ್ಪು, ನೀರು ಮತ್ತು ಕೊತ್ತಂಬರಿ ಸೊಪ್ಪು – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಆಲೂಗಡ್ಡೆಯನ್ನು ಬೇಯಿಸಿ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ ಮತ್ತು ಹಸಿಮೆಣಸು ಹಾಕಿ. ನಂತರ ಕತ್ತರಿಸಿದ ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿ. ಆಲೂಗಡ್ಡೆ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ 5–7 ನಿಮಿಷ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಸಬ್ಜಿ ಸಿದ್ಧ.

ರಾಜಗಿರಾ ಹಿಟ್ಟಿನ ಪೂರಿ
ರಾಜಗಿರಾ ಹಿಟ್ಟು – 1 ಕಪ್
ಬೇಯಿಸಿದ ಆಲೂಗಡ್ಡೆ – 1 ಸಣ್ಣದು
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ನೀರು ಮತ್ತು ಕರಿಯಲು ತುಪ್ಪ ಅಥವಾ ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಹಿಟ್ಟಿಗೆ ಹಿಸುಕಿದ ಆಲೂಗಡ್ಡೆ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪಸ್ವಲ್ಪ ನೀರು ಹಾಕಿ ಮೃದುವಾದ ಹಿಟ್ಟನ್ನು ತಯಾರಿಸಿ. ಸಣ್ಣ ಉಂಡೆಗಳನ್ನು ಮಾಡಿ ಪೂರಿಯ ಆಕಾರಕ್ಕೆ ತಟ್ಟಿ ಬಿಸಿ ಎಣ್ಣೆ ಅಥವಾ ತುಪ್ಪದಲ್ಲಿ ಕರಿಯಿರಿ.

ಮಖಾನಾ ಖೀರ್
ಮಖಾನಾ – 1 ಕಪ್
ಹಾಲು – 500 ಮಿ.ಲೀ.
ಸಕ್ಕರೆ – 2–3 ಚಮಚ
ಏಲಕ್ಕಿ ಪುಡಿ – ಸ್ವಲ್ಪ
ಬಾದಾಮಿ ಮತ್ತು ಗೋಡಂಬಿ – ಸ್ವಲ್ಪ
ಮಾಡುವ ವಿಧಾನ:
ಮಖಾನಾವನ್ನು ತುಪ್ಪದಲ್ಲಿ ಸ್ವಲ್ಪ ಹುರಿದು, ಅರ್ಧದಷ್ಟು ಮಖಾನಾವನ್ನು ಪುಡಿ ಮಾಡಿಕೊಳ್ಳಿ. ಪಾತ್ರೆಯಲ್ಲಿ ಹಾಲನ್ನು ಕುದಿಸಿ, ಮಖಾನಾ ಸೇರಿಸಿ ಕಡಿಮೆ ಉರಿಯಲ್ಲಿ 10–15 ನಿಮಿಷ ಬೇಯಿಸಿ. ಸಕ್ಕರೆ, ಏಲಕ್ಕಿ ಪುಡಿ ಮತ್ತು ಕತ್ತರಿಸಿದ ಡ್ರೈಫ್ರೂಟ್ಸ್ ಸೇರಿಸಿ. ಖೀರ್ ಸ್ವಲ್ಪ ಗಟ್ಟಿಯಾದ ಬಳಿಕ ಒಲೆಯಿಂದ ಇಳಿಸಿ ಬಿಸಿಯಾಗಿ ಅಥವಾ ತಣ್ಣಗೆ ಬಡಿಸಿ.

ಮೊಸರು–ಪುದೀನ ಚಟ್ನಿ
ತಾಜಾ ಮೊಸರು – ½ ಕಪ್
ಪುದೀನ ಸೊಪ್ಪು – ಒಂದು ಹಿಡಿ
ಹಸಿಮೆಣಸು – 1
ಜೀರಿಗೆ ಪುಡಿ – ¼ ಚಮಚ
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಪುದೀನ ಸೊಪ್ಪು ಮತ್ತು ಹಸಿಮೆಣಸನ್ನು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಮೊಸರು, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಚಟ್ನಿ ರೆಡಿ.

ಸೌತೆಕಾಯಿ ಸಲಾಡ್
ಸೌತೆಕಾಯಿ – 1
ಟೊಮೆಟೊ – 1
ನಿಂಬೆ ರಸ – ಸ್ವಲ್ಪ
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಸೌತೆಕಾಯಿ ಮತ್ತು ಟೊಮೆಟೊವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ನಿಂಬೆ ರಸ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ. ತಾಜಾ ಸಲಾಡನ್ನು ಊಟದ ಜೊತೆಗೆ ಬಡಿಸಿ.



