ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಹಿನ್ನೆಲೆ ಗಾಯಕ ಕುಮಾರ್ ಸಾನು ತಮ್ಮ ಮಾಜಿ ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ತಮ್ಮ ಖ್ಯಾತಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಕ್ಷಮೆಯಾಚಿಸಬೇಕು ಮತ್ತು 50 ಕೋಟಿ ರುಪಾಯಿ ಪರಿಹಾರ ನೀಡುವಂತೆ ಕೋರಿದ್ದಾರೆ.
ವಕೀಲೆ ಸನಾ ರಯೀಸ್ ಖಾನ್ ಮೂಲಕ ಸಲ್ಲಿಸಲಾದ ಈ ಮೊಕದ್ದಮೆಯಲ್ಲಿ, ಸಾನು ಮತ್ತು ಅವರ ಕುಟುಂಬದ ವಿರುದ್ಧ ಅವಹೇಳನಕಾರಿಯಾದ ಯಾವುದೇ ಹೇಳಿಕೆಗಳು ಅಥವಾ ಪೋಸ್ಟ್‌ಗಳನ್ನು ಮಾಡದಂತೆ ಅವರ ಮಾಜಿ ಪತ್ನಿ ರೀಟಾ ಭಟ್ಟಾಚಾರ್ಯ ಅವರಿಗೆ ಸೂಚಿಸಲಾಗಿದೆ.
ಇದರ ಜತೆಗೆ ಮೆಟಾ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳು ತಮ್ಮ ಸೈಟ್‌ಗಳಲ್ಲಿ ಈಗಾಗಲೇ ಪ್ರಕಟಿಸಿರುವ ಎಲ್ಲ ಅವಹೇಳನಕಾರಿ ಪೋಸ್ಟ್ ತೆಗೆದುಹಾಕುವಂತೆ ನಿರ್ದೇಶನ ನೀಡಲಾಗಿದೆ.
ರೀಟಾ ಭಟ್ಟಾಚಾರ್ಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ವೈರಲ್ ಭಯಾನಿ ಮತ್ತು ಫಿಲ್ಮ್ ವಿಂಡೋಗೆ ನೀಡಿದ್ದ ಸಂದರ್ಶನದಲ್ಲಿ ಗರ್ಭಿಣಿಯಾಗಿದ್ದಾಗ ತನ್ನೊಂದಿಗೆ ಕುಮಾರ್ ಸಾನು ಕೆಟ್ಟದಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದರು. ತನಗೆ ಸರಿಯಾಗಿ ಆಹಾರ ನೀಡುತ್ತಿರಲಿಲ್ಲ. ಅಡುಗೆಮನೆಗೆ ಸೀಮಿತಗೊಳಿಸಿದ್ದರು ಮತ್ತು ವೈದ್ಯಕೀಯ ಆರೈಕೆಯನ್ನೂ ಪಡೆಯಲು ಬಿಟ್ಟಿರಲಿಲ್ಲ ಎಂದು ದೂರಿದ್ದರು.
ಇನ್ನು ಈ ಆರೋಪಗಳನ್ನು ಕುಮಾರ್ ಸಾನು ಹಾಗೂ ಅವರ ಕಾನೂನು ತಂಡವು ತಳ್ಳಿ ಹಾಕಿದೆ. ಇದು ದುರುದ್ದೇಶಪೂರಿತ ಮತ್ತು ಅವರ ಖ್ಯಾತಿಗೆ ಗಂಭೀರ ಹಾನಿಯನ್ನುಂಟು ಮಾಡಿದೆ ಎಂದು ವಾದಿಸಿದೆ.
ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ 2001ರ ವಿಚ್ಛೇದನ ಒಪ್ಪಂದದಲ್ಲಿನ ಸಮ್ಮತಿ ಷರತ್ತನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಇಬ್ಬರೂ ಕೂಡ ಭವಿಷ್ಯದಲ್ಲಿ ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡಬಾರದು ಎಂದು ಷರತ್ತು ವಿಧಿಸಿದೆ ಎಂದು ವರದಿಯಾಗಿದೆ. ಆದರೆ ರೀಟಾ ಸಂದರ್ಶನದಲ್ಲಿ ಕೆಲವು ಹೇಳಿಕೆಗಳನ್ನು ನೀಡಿರುವುದು ಈ ಷರತ್ತಿನ ಉಲ್ಲಂಘನೆ ಎಂದು ಸಾನು ಆರೋಪಿಸಿದ್ದಾರೆ.
1986ರ ನವೆಂಬರ್ 18ರಂದು ಸಾನು ಹಾಗೂ ರೀಟಾ ವಿವಾಹವಾದರು. ಆದರೆ ಈ ವಿವಾಹವು ಹೆಚ್ಚು ಕಾಲ ಉಳಿಯಲಿಲ್ಲ. 1994ರಲ್ಲಿ ಮದುವೆಯ ಏಳು ವರ್ಷಗಳ ನಂತರ, ಇಬ್ಬರೂ ಬೇರ್ಪಟ್ಟರು. ಏಳು ವರ್ಷಗಳ ನಂತರ ಅಂದರೆ 2001ರಲ್ಲಿ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದರು. 2001ರ ಫೆಬ್ರವರಿ 16ರಂದು ಸಾನು ಮತ್ತೆ ಎರಡನೇ ಮದುವೆಯಾದರು.

