‘ಒಲವಿನ ಉಡುಗೊರೆ ಕೊಡಲೇನು’ ಖ್ಯಾತಿಯ ಗಾಯಕ ಪಿ.ಜಯಚಂದ್ರನ್‌ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮ್ಮ ಹಾಡುಗಳ ಮೂಲಕ ಆರು ದಶಕಗಳಿಗೂ ಹೆಚ್ಚು ಕಾಲ ಹೃದಯಗಳನ್ನು ಸೂರೆಗೊಂಡಿದ್ದ ಹಿರಿಯ ಹಿನ್ನೆಲೆ ಗಾಯಕ ಮಲಯಾಳಂ ಮೂಲದ ಪಿ. ಜಯಚಂದ್ರನ್ (80) ಗುರುವಾರ ನಿಧನರಾದರು.

ಅವರು ಪತ್ನಿ ಲಲಿತಾ, ಮಗಳು ಲಕ್ಷ್ಮಿ ಮತ್ತು ಮಗ ದೀನನಾಥನ್ ಅವರನ್ನು ಅಗಲಿದ್ದಾರೆ. ಅವರ ಪುತ್ರ ದೀನನಾಥನ್ ಕೂಡ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದವರಾಗಿದ್ದಾರೆ

ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 16,000 ಕ್ಕೂ ಹೆಚ್ಚು ಹಾಡುಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದರು.

ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಕೇರಳ ಸರ್ಕಾರದಿಂದ ಜೆ.ಸಿ. ಡೇನಿಯಲ್ ಪ್ರಶಸ್ತಿ, ಮತ್ತು ಕೇರಳ ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ, ಮತ್ತು ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ, ಜೊತೆಗೆ ನಾಲ್ಕು ತಮಿಳುನಾಡು ರಾಜ್ಯ ಪ್ರಶಸ್ತಿಗಳು ಸೇರಿವೆ.

ಕನ್ನಡದ ಪ್ರಸಿದ್ದ ಹಾಡುಗಳ ಗಾಯಕ:
ಕನ್ನಡದಲ್ಲಿ ಪಿ.ಜಯಚಂದ್ರನ್‌ ಸೂಪರ್‌ ಹಿಟ್‌ ಹಾಡುಗಳನ್ನು ಹಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅಂಬರೀಷ್‌ ಅಭಿನಯದ ಒಲವಿನ ಉಡುಗೊರೆ ಸಿನಿಮಾದ ‘ಒಲವಿನ ಉಡುಗೊರೆ ಕೊಡಲೇನು..’, ಅಮೃತ ಘಳಿಗೆ ಸಿನಿಮಾದ ‘ಹಿಂದೂಸ್ತಾನವು ಎಂದೂ ಮರೆಯದ..’, ರಂಗನಾಯಕಿ ಸಿನಿಮಾದ ‘ಮಂದಾರ ಪುಷ್ಪವು ನೀನು..’, ಮಾನಸ ಸರೋವರದ ‘ಚಂದ..ಚಂದ..’, ಹಂತಕನ ಸಂಚು ಸಿನಿಮಾದ ‘ಜೀವನ ಸಂಜೀವನ..’. ಭಕ್ತ ಪ್ರಹ್ಲಾದ ಸಿನಿಮಾದ ‘ಕಮಲ ನಯನ.. ಕಮಲ ವದನ..’ ಪ್ರಾಯ ಪ್ರಾಯ ಪ್ರಾಯ ಸಿನಿಮಾದ ‘ಭೂಮಿ ತಾಯಾಣೆ, ನೀ ಇಷ್ಟ ಕಣೆ..’ ಹಾಗೂ ಮಸಣದ ಹೂವು ಚಿತ್ರದ ‘ಕನ್ನಡ ನಾಡಿನ ಕರಾವಳಿ..’ ಯಂಥ ಸುಪ್ರಸಿದ್ದ ಗೀತೆಗಳಿಗೆ ಅವರು ದನಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!