ಹೊಸ ದಿಗಂತ ಡಿಜಿಟಲ್ ಡೆಸ್ಕ್
ಇಂದಿರಾ ಗಾಂಧಿಯನ್ನು ಮೊದಲು ಬೈಯ್ಯುತ್ತಿದ್ದ ಸಿದ್ರಾಮಣ್ಣನವರು ಕೊನೆಗೆ ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಆದರು. ಇದು ಧಾರವಾಡದಲ್ಲಿ ಗುರುವಾರ ‘ಜನಸಂಕಲ್ಪ’ ಯಾತ್ರೆಯ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ವಾಗ್ದಾಳಿ.
ರಾಹುಲ್ ಗಾಂಧಿಯವರನ್ನು ತಮ್ಮ ಮಾತುಗಳಲ್ಲಿ ಟೀಕಿಸಿದ ಬಿ ಎಸ್ ವೈ ವಿರುದ್ಧ ಸಿದ್ದರಾಮಯ್ಯನವರು ಕಿಡಿಕಾರುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸುವಾಗ ನಳೀನ್ ಕುಮಾರ್ ಕಟೀಲ್ ಹೀಗೆ ಹೇಳಿದ್ದಾರೆ.
“ಯಡಿಯೂರಪ್ಪ ಅವರು ಅವರು ಈ ರಾಜ್ಯದಲ್ಲಿ ಮಾಡಿದಷ್ಟು ಪಾದಯಾತ್ರೆಗಳು, ಸೈಕಲ್ ಯಾತ್ರೆಗಳು ಮತ್ತು ಹೋರಾಟಗಳನ್ನು ಇವತ್ತು ಯಾರೂ ಮಾಡಿಲ್ಲ. ಅದು ಯಾವ ನಾಯಕರಿಂದಲೂ ಸಾಧ್ಯವೂ ಇಲ್ಲ. ಸಿದ್ರಾಮಣ್ಣ ಅಧಿಕಾರ ಕಳಕೊಂಡು ಹುಚ್ಚರಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ ಕೆಟ್ಟ ಕೆಟ್ಟ ಶಬ್ದದಿಂದ ಏಕವಚನದಿಂದ ಮಾತನಾಡಿ ದುರಹಂಕಾರ ತೋರುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಡಿ.ಕೆ.ಶಿವಕುಮಾರ್ – ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುವ ಭಯ ಅವರನ್ನು ಕಾಡುತ್ತಿದೆ.” ಎಂದಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷರು.
ರಾಹುಲ್ ಗಾಂಧಿ ಕೇವಲ ಸಂಸದರಷ್ಟೇ. ಕಾಂಗ್ರೆಸ್ ನಾಯಕರಿರಬಹುದು. ಮೋದಿಯವರು ಈ ದೇಶದ ಪ್ರಧಾನಮಂತ್ರಿ. ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದಾಗ ಅವರನ್ನು ಬಿಜೆಪಿ ಹಿರಿಯ ಮುಖಂಡ- ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿಯವರು ಯಾವತ್ತೂ ಏಕವಚನದಿಂದ ಟೀಕಿಸಿರಲಿಲ್ಲ. ವಿರೋಧ ಪಕ್ಷಗಳ ಮಾದರಿ ನಡವಳಿಕೆಗೆ ಅಟಲ್ ಬಿಹಾರಿ ವಾಜಪೇಯಿ ಅವರು ಮಾದರಿ. ಸಿದ್ರಾಮಣ್ಣನ ವಿರುದ್ಧ ಯಡಿಯೂರಪ್ಪರವರು ಹೇಳಿದ್ದು ಸರಿ ಇದೆ ಎಂದು ಸಮರ್ಥಿಸಿದರು.