Friday, December 26, 2025

ಮೂಕಪ್ರಾಣಿಯ ಮೇಲಿನ ಮಮತೆಗೆ ಜೀವ ತೆತ್ತ ಸೋದರಿಯರು: ಸಾವಿನಲ್ಲೂ ಮರೆಯದ ಪ್ರಾಣಿ ಪ್ರೇಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಾಣಿಗಳ ಮೇಲಿನ ಅತಿಯಾದ ಪ್ರೀತಿ ಮತ್ತು ಅವುಗಳನ್ನು ಕಳೆದುಕೊಳ್ಳುವ ಭೀತಿ ಇಬ್ಬರು ಯುವತಿಯರ ಪ್ರಾಣವನ್ನೇ ಬಲಿಪಡೆದಿರುವ ಕರುಣಾಜನಕ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ನೆಚ್ಚಿನ ಜರ್ಮನ್ ಶೆಫರ್ಡ್ ನಾಯಿ ‘ಟೋನಿ’ ಚೇತರಿಸಿಕೊಳ್ಳದಿದ್ದನ್ನು ಕಂಡು ಮನನೊಂದ ರಾಧಾ ಸಿಂಗ್ (24) ಮತ್ತು ಜಿಯಾ ಸಿಂಗ್ (22) ಎಂಬ ಸಹೋದರಿಯರು ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆಯ ವಿವರ:

ಲಕ್ನೋದ ದೋಡಾ ಖೇಡಾ ಗ್ರಾಮದ ಈ ಇಬ್ಬರೂ ಸಹೋದರಿಯರು ಪದವೀಧರರಾಗಿದ್ದರು. ಕಳೆದ ಏಳು ವರ್ಷಗಳಿಂದ ಅವರ ಮನೆಯ ಸದಸ್ಯನಂತಿದ್ದ ಟೋನಿ, ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ. ಎಷ್ಟೇ ಚಿಕಿತ್ಸೆ ಕೊಡಿಸಿದರೂ ನಾಯಿಯ ಆರೋಗ್ಯ ಸುಧಾರಿಸಿರಲಿಲ್ಲ. ಅದು ಆಹಾರ ಸೇವಿಸುವುದನ್ನು ನಿಲ್ಲಿಸಿದಾಗ, ಅಕ್ಕ-ತಂಗಿಯರೂ ಕೂಡ ಊಟ ಮಾಡುವುದನ್ನು ಬಿಟ್ಟು ಕಣ್ಣೀರಿನಲ್ಲಿ ಕಾಲ ದೂಡುತ್ತಿದ್ದರು. ಕೊನೆಗೆ ನಾಯಿ ಸಾಯುವುದನ್ನು ನೋಡಲಾಗದೆ, ತಾವೇ ಮೊದಲು ಪ್ರಾಣ ಬಿಡಲು ನಿರ್ಧರಿಸಿ ಈ ಕಠಿಣ ಹೆಜ್ಜೆ ಇಟ್ಟಿದ್ದಾರೆ.

ಫಿನಾಯಿಲ್ ಸೇವಿಸಿದ ನಂತರ ಪ್ರಜ್ಞೆ ಕಳೆದುಕೊಳ್ಳುವ ಮೊದಲು ತಾಯಿಯ ಬಳಿ ಮಾತನಾಡಿದ ಅವರು, “ನಾವು ಸತ್ತ ಮೇಲೆ ಟೋನಿಯನ್ನು ಮನೆಯಿಂದ ಹೊರಹಾಕಬೇಡಿ, ಅದಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸಿ” ಎಂದು ಅಳುತ್ತಾ ಬೇಡಿಕೊಂಡಿದ್ದಾರೆ. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ರಾಧಾ ಸಾವನ್ನಪ್ಪಿದರೆ, ಜಿಯಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಕುಟುಂಬವು ಈಗಾಗಲೇ ಸಾಲು ಸಾಲು ದುರಂತಗಳನ್ನು ಕಂಡಿದೆ. ಆರು ತಿಂಗಳಿನಿಂದ ತಂದೆ ಕೈಲಾಶ್ ಸಿಂಗ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೆ, ಏಳು ವರ್ಷಗಳ ಹಿಂದೆ ಈ ದಂಪತಿಗಳು ತಮ್ಮ ಮಗನನ್ನು ಕಳೆದುಕೊಂಡಿದ್ದರು. ಇದೀಗ ಇಬ್ಬರು ಹೆಣ್ಣುಮಕ್ಕಳನ್ನು ಕಳೆದುಕೊಂಡು ತಾಯಿ ಗುಲಾಬಾ ದೇವಿ ಅನಾಥರಾಗಿದ್ದಾರೆ.

error: Content is protected !!