Friday, October 31, 2025

ಧರ್ಮಸ್ಥಳ ಪೊಲೀಸ್ ಠಾಣೆಗೆ ಎಸ್ ಐಟಿ ಅಧಿಕಾರಿ ಜಿತೇಂದ್ರ ದಯಾಮ ದಿಢೀರ್ ಭೇಟಿ

 ಹೊಸದಿಗಂತ ವರದಿ,ಮಂಗಳೂರು:

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಹೂತಿಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ತನ್ನ ತನಿಖೆ ತೀವ್ರಗೊಳಿಸಿದೆ.

ಈ ನಡುವೆ ಮಂಗಳೂರಿಗೆ ಆಗಮಿಸಿರುವ ಎಸ್ ಐಟಿ ಅಧಿಕಾರಿ ಜಿತೇಂದ್ರ ದಯಾಮ ಅವರು ಜು.25 ರಂದು ರಾತ್ರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿದ್ದಾರೆ.

ಮಂಗಳೂರಿಗೆ ಆಗಮಿಸಿದ್ದ ಅವರು ರಾತ್ರಿಯಾಗುತ್ತಲೇ ಪ್ರಕರಣದ ಕುರಿತಾದ ಮಾಹಿತಿ ಕಲೆಹಾಕುವ ಹಾಗೂ ಅದಕ್ಕೆ ಸಂಬಂಧಿಸಿದ ಕೇಸ್ ಫೈಲ್ ಪಡೆಯಲು ರಾತ್ರಿಯೇ ಆಗಮಿಸಿದ್ದಾರೆ. ಈ ಸಂದರ್ಭ ಠಾಣೆಯ ಎಸ್.ಐ. ಸಮರ್ಥ್ ಆರ್. ಗಾಣಿಗೇರ್ ಜತೆಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂಳಿದ್ದೇನೆ ಎಂದು ಹೇಳಿರುವ ಅನಾಮಿಕ ವ್ಯಕ್ತಿಯ ಮುಸುಕು ತೆರವುಗೊಳಿಸಿ ವಿಚಾರಣೆ ನಡೆದಿದೆ ಎನ್ನಲಾಗಿದೆ. ಅನಾಮಿಕ ವ್ಯಕ್ತಿಯ ಜೊತೆ ಬಂದಿರುವ ಇಬ್ಬರು ವಕೀಲರ ಜೊತೆ ಪ್ರತ್ಯೇಕ ಮಾತುಕತೆ ನಡೆದಿದೆ. ಅನಾಮಿಕ ದೂರುದಾರ ಈಗಾಗಲೇ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದು, ಈಗ ಮೊದಲ ಬಾರಿಗೆ ಎಸ್‌ಐಟಿಗೆ ಮಾಹಿತಿ ನೀಡಿದ್ದಾರೆ.

ತಾನು ಎಲ್ಲೆಲ್ಲಿ ಶವ ಹೂತಿಟ್ಟಿದ್ದೇನೆ ಎಂಬುದನ್ನು ಬಹಿರಂಗಪಡಿಸಲು ಸಿದ್ಧ ಅನಾಮಿಕ ದೂರುದಾರ ತಿಳಿಸಿದ್ದು, ಹೂತಿಟ್ಟ ಶವಗಳ ಮಹಜರಿಗೂ ಮುನ್ನ ಮಹತ್ವದ ತನಿಖೆ ನಡೆಯಲಿದೆ.

ತನಿಖಾ ತಂಡ
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ತನಿಖೆಗೆ ರಾಜ್ಯ ಸರಕಾರವು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಿದೆ. ತಂಡದಲ್ಲಿ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್. ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದಾರೆ. ತನಿಖಾ ತಂಡದಲ್ಲಿ ದ.ಕ, ಉಡುಪಿ, ಉ.ಕನ್ನಡ ಜಿಲ್ಲೆಗಳಿಂದ ನೇಮಿಸಲ್ಪಟ್ಟ ಅಧಿಕಾರಿಗಳಿದ್ದಾರೆ.

error: Content is protected !!