ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಕಾರಿನ ಬಾನೆಟ್ ಮೇಲೆ ಕುಳಿತಿದ್ದ ‘ಸ್ಪೈಡರ್ ಮ್ಯಾನ್’ ವೇಷಧಾರಿಯನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸ್ಪೈಡರ್ ಮ್ಯಾನ್ ವೇಷಭೂಷಣವನ್ನು ಧರಿಸಿದ ವ್ಯಕ್ತಿಯೊಬ್ಬ ಕಾರಿನ ಬಾನೆಟ್ ಮೇಲೆ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ದೆಹಲಿ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ.
ದ್ವಾರಕಾ ರಸ್ತೆಗಳಲ್ಲಿ ಸ್ಪೈಡರ್ ಮ್ಯಾನ್ ವೇಷಧಾರಿ ವ್ಯಕ್ತಿಯೊಬ್ಬರು ಚಲಿಸುತ್ತಿರುವ ಕಾರಿನ ಬಾನೆಟ್‌ನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೂರನ್ನು ಸ್ವೀಕರಿಸಿದ ದೆಹಲಿ ಟ್ರಾಫಿಕ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸ್ಪೈಡರ್ ಮ್ಯಾನ್ ವೇಷಭೂಷಣದಲ್ಲಿರುವ ವ್ಯಕ್ತಿಯನ್ನು ಆದಿತ್ಯ (20) ಎಂದು ಗುರುತಿಸಲಾಗಿದ್ದು, ಆತ ನಜಾಫ್‌ಗಢದ ನಿವಾಸಿ ಎಂದು ತಿಳಿದುಬಂದಿದೆ.
ಕಾರಿನ ಚಾಲಕನನ್ನು ಮಹಾವೀರ್ ಎನ್‌ಕ್ಲೇವ್‌ನಲ್ಲಿ ನೆಲೆಸಿರುವ ಗೌರವ್ ಸಿಂಗ್ (19) ಎಂದು ಗುರುತಿಸಲಾಗಿದೆ. ವಾಹನದ ಮಾಲೀಕರು ಮತ್ತು ಚಾಲಕರು ಅಪಾಯಕಾರಿ ಚಾಲನೆ, ಮಾಲಿನ್ಯ ಪ್ರಮಾಣ ಪತ್ರವಿಲ್ಲದೆ ಚಾಲನೆ, ಮತ್ತು ಸೀಟ್‌ಬೆಲ್ಟ್ ಧರಿಸದಿದ್ದಕ್ಕಾಗಿ ಕಾನೂನು ಕ್ರಮ ಜರುಗಿಸಲಾಗಿದ್ದು, ಕಾರಿನ ಚಾಲಕನಿಗೆ ₹26,000 ದಂಡ ವಿಧಿಸಲಾಗಿದೆ .