ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುನೆಸ್ಕೋದ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಭಾರತದ ಅಶೋಕನ ಶಾಸನ ತಾಣಗಳು ಮತ್ತು ವಿವಿಧ ರಾಜ್ಯಗಳಲ್ಲಿ ಹರಡಿರುವ ಚೌಸತ್ ಯೋಗಿನಿ ದೇವಾಲಯಗಳು ಸೇರಿದಂತೆ ಆರು ಸ್ಥಳಗಳನ್ನು ಸೇರಿಸಿದೆ.
ಈ ತಾಣಗಳನ್ನು ಮಾರ್ಚ್ 7 ರಂದು ಪಟ್ಟಿಗೆ ಸೇರಿಸಲಾಗಿದೆ ಎಂದು ಯುನೆಸ್ಕೋಗೆ ಭಾರತದ ಖಾಯಂ ನಿಯೋಗ ಹೇಳಿಕೆಯಲ್ಲಿ ತಿಳಿಸಿದೆ. ಯುನೆಸ್ಕೋದ ಭಾರತ ವಿಭಾಗವು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಹೇಳಿಕೆಯನ್ನು ಶೇರ್ ಮಾಡಿದೆ.
ಭವಿಷ್ಯದಲ್ಲಿ ಸ್ಥಳವೊಂದನ್ನು ವಿಶ್ವ ಪರಂಪರೆಯ ಪಟ್ಟಿಗೆ ನಾಮನಿರ್ದೇಶನ ಮಾಡಬೇಕಾದರೆ ವಿಶ್ವ ಪರಂಪರೆ ಕೇಂದ್ರದ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗುವುದು ಕಡ್ಡಾಯವಾಗಿದೆ ಎಂದು ಹೇಳಿದೆ.
ತಾತ್ಕಾಲಿಕ ಪಟ್ಟಿಗೆ ಸೇರಿಸಲಾದ ಆರು ಸ್ಥಳಗಳಲ್ಲಿ ಛತ್ತೀಸ್ ಗಢದ ಕಂಗರ್ ಕಣಿವೆ ರಾಷ್ಟ್ರೀಯ ಉದ್ಯಾನ, ತೆಲಂಗಾಣದ ಮುದುಮಲ್ ಮೆಗಾಲಿಥಿಕ್ ಮೆನ್ಹಿರ್ ಗಳು, ಮೌರ್ಯರ ಕಾಲದ (ಬಹು ರಾಜ್ಯಗಳು) ಅಶೋಕನ ಶಾಸನ ತಾಣಗಳ ಸರಣಿ, ಚೌಸತ್ ಯೋಗಿನಿ ದೇವಾಲಯಗಳ ಸರಣಿ (ಅನೇಕ ರಾಜ್ಯಗಳು), ಉತ್ತರ ಭಾರತದ (ಅನೇಕ ರಾಜ್ಯಗಳು) ಗುಪ್ತ ದೇವಾಲಯಗಳು ಮತ್ತು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಬುಂದೇಲರ ಅರಮನೆ – ಕೋಟೆಗಳು ಸೇರಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಾತ್ಕಾಲಿಕ ಪಟ್ಟಿಯಲ್ಲಿ ಭಾರತದ 62 ತಾಣಗಳು: ಈ ಸೇರ್ಪಡೆಗಳೊಂದಿಗೆ ಭಾರತವು ಈಗ ತಾತ್ಕಾಲಿಕ ಪಟ್ಟಿಯಲ್ಲಿ 62 ತಾಣಗಳನ್ನು ಹೊಂದಿದೆ. ‘ತಾತ್ಕಾಲಿಕ ಪಟ್ಟಿ’ಯು ಯುನೆಸ್ಕೋ ನಾಮನಿರ್ದೇಶನಕ್ಕಾಗಿ ಪ್ರತಿ ದೇಶವು ಪರಿಗಣಿಸಲು ಬಯಸುವ ತನ್ನ ತಾಣಗಳ ಪಟ್ಟಿಯಾಗಿದೆ.
ಪ್ರಸ್ತುತ, ಭಾರತದ ಒಟ್ಟು 43 ತಾಣಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೆರ್ಪಡೆ ಮಾಡಲಾಗಿದೆ. ಇದರಲ್ಲಿ 35 ‘ಸಾಂಸ್ಕೃತಿಕ’ ವಿಭಾಗದಲ್ಲಿ, ಏಳು ‘ನೈಸರ್ಗಿಕ’ ಮತ್ತು ಒಂದು ‘ಮಿಶ್ರ’ ವಿಭಾಗದಲ್ಲಿದೆ.