ರಾಜ್ಯದಲ್ಲಿ ಆರು ವಿದ್ಯಾರ್ಥಿಗಳು ಆತ್ಮಹತ್ಯೆ: ʼಜಾಸ್ತಿ ಮಾರ್ಕ್ಸ್‌ʼ ಅನ್ನೋದು ಜೀವಕ್ಕಿಂತ ಮುಖ್ಯನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕರ್ನಾಟಕ ದ್ವಿತೀಯ ಪಿಯು ಪಿಯುಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು ಒಟ್ಟಾರೆಯಾಗಿ ಶೇಕಡ 73.45 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಮತ್ತೊಂದೆಡೆ, ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಎರಡು ಹಾಗೂ ಮೂರನೆಯ ಪರೀಕ್ಷೆಗೆ ಶುಲ್ಕರಹಿತ ವ್ಯವಸ್ಥೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ. ಇಷ್ಟಾದರೂ, ಅನುತ್ತೀರ್ಣಗೊಂಡ ಹಾಗೂ ನಿರೀಕ್ಷಿಸಿದ ಅಂಕ ಬಂದಿಲ್ಲವೆಂದು ನೊಂದ ಆರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲವು ಜಿಲ್ಲೆಗಳಲ್ಲಿ ನಡೆದಿದೆ.

ಪೋಷಕರ ಪ್ರೆಶರ್‌ ಅಥವಾ ಸೊಸೈಟಿಯ ಎಕ್ಸ್ಪೆಕ್ಟೇಷನ್ಸ್‌ ಮೀಟ್‌ ಮಾಡಲಾರದೆ ಎಷ್ಟೋ ವಿದ್ಯಾರ್ಥಿಗಳು ಒದ್ದಾಡುತ್ತಾರೆ. ಬದುಕಿದ್ದರೆ ಹತ್ತು ಬಾರಿ ಪಿಯುಸಿ ಎಕ್ಸಾಮ್‌ ಬರೆಯಬಹುದು ಆದರೆ ಜೀವವೇ ಇಲ್ಲದೆ ಹೋದರೆ? ಜೀವಕ್ಕಿಂತ ಮಾರ್ಕ್ಸ್‌ ಮುಖ್ಯ ಆಗಿ ಹೋಯ್ತಾ ಎನ್ನುವಂತಾಗಿದೆ.

ಮೈಸೂರು ಜಿಲ್ಲೆಯ ಒಂಟಿಕೊಪ್ಪಲ್ಲಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೊಂದು ಕಡೆ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಅಗಸನೂರು ಎಂಬಲ್ಲಿ ವಿಜಯಲಕ್ಷ್ಮಿ ಸಿರಗುಪ್ಪದ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲಾದ ವಿಷಯ ತಿಳಿದು ಆಘಾತಕ್ಕೊಳಗಾದ, ಕೃಪಾ ಎಂಬ ವಿದ್ಯಾರ್ಥಿನಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ದಾವಣಗೆರೆ ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಳು. ಹಾವೇರಿಯ ಹಂಸಬಾವಿ ಠಾಣಾ ವ್ಯಾಪ್ತಿಯ ಪಿಯುಸಿ ವಿದ್ಯಾರ್ಥಿ ಕಾವ್ಯ ಬಸಪ್ಪ ಲಮಾಣಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ, ಘಟನೆ ಸಂಬಂಧಪಟ್ಟ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುವುದಕ್ಕೂ ಕೆಲವೇ ಗಂಟೆಗಳ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರಣ್ಯಪುರದ ಸಪ್ತಗಿರಿ ಲೇಔಟ್‌ನ ಅಪಾರ್ಟ್ಮೆಂಟ್ ಒಂದರಲ್ಲಿ ಈ ಘಟನೆ ಸಂಭವಿಸಿದೆ. ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣ ಆದರೂ ಕಡಿಮೆ ಅಂಕ ಬಂದಿದೆ ಎಂದು ಪಿಯುಸಿ ವಿದ್ಯಾರ್ಥಿ ಕೆ.ಪಿ ಮನೋಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಿಯುಸಿಯಲ್ಲಿ 79% ಅಂಕ ಗಳಿಸಿದ್ದರೂ ಅದನ್ನೇ ಕಡಿಮೆ ಎಂದು ಭಾವಿಸಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!