October 15, 2026
Thursday, October 15, 2026
spot_img

‘ದಾದಾ’ ಮಾತಿಗೇ ಬೆಲೆ ಕೊಟ್ಟ ಸಿಕ್ಸರ್ ಕಿಂಗ್: ಗಂಗೂಲಿ ಜೊತೆ ಕೈಜೋಡಿಸಿದ ಯುವರಾಜ್ ಸಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಲ್‌ರೌಂಡರ್ ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್, ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡಕ್ಕೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ ಈ ಬಾರಿ ಅವರು ಮೈದಾನದಲ್ಲಿ ಬ್ಯಾಟ್ ಹಿಡಿದು ಸಿಕ್ಸರ್‌ಗಳನ್ನು ಸಿಡಿಸುವುದಿಲ್ಲ, ಬದಲಿಗೆ ಮುಂಬರುವ ಐಪಿಎಲ್ ಆವೃತ್ತಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇದು ಯುವಿ ಕ್ರಿಕೆಟ್ ಜೀವನದ ಮೊದಲ ಅಧಿಕೃತ ಪೂರ್ಣ ಪ್ರಮಾಣದ ಕೋಚಿಂಗ್ ಅನುಭವವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಇತ್ತೀಚೆಗಷ್ಟೇ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ತನ್ನ ಮುಖ್ಯ ತರಬೇತುದಾರರನ್ನಾಗಿ ಘೋಷಿಸಿತ್ತು. ಇದೀಗ ಗಂಗೂಲಿ ಅವರ ನೇತೃತ್ವದ ಕೋಚಿಂಗ್ ಬಳಗಕ್ಕೆ ಯುವರಾಜ್ ಸಿಂಗ್ ಸೇರ್ಪಡೆಗೊಂಡಿದ್ದಾರೆ.

ತಮ್ಮ ಹೊಸ ಜವಾಬ್ದಾರಿಯ ಬಗ್ಗೆ ಖುಷಿ ಹಂಚಿಕೊಂಡಿರುವ ಯುವರಾಜ್, “ದಾದಾ ನನ್ನ ಬಳಿ ಬಂದು ‘ನನ್ನ ಅಸಿಸ್ಟೆಂಟ್ ಆಗ್ತೀಯಾ?’ ಎಂದು ಕೇಳಿದರು. ಅದಕ್ಕೆ ನಾನು, ‘ಕಳೆದ 25 ವರ್ಷಗಳಿಂದಲೂ ನಾನು ನಿಮ್ಮ ಅಸಿಸ್ಟೆಂಟ್ ಆಗಿಯೇ ಇದ್ದೇನೆ, ಈಗಲೂ ಅದೇ ಕೆಲಸ ಮಾಡುತ್ತೇನೆ’ ಎಂದು ತಮಾಷೆ ಮಾಡಿದೆ. ಡೆಲ್ಲಿ ತಂಡದೊಂದಿಗೆ ಈ ಹೊಸ ಪ್ರಯಾಣ ಆರಂಭಿಸಲು ತುಂಬಾ ಉತ್ಸುಕನಾಗಿದ್ದೇನೆ” ಎಂದಿದ್ದಾರೆ.

ಕಳೆದ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡದೆ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು ಹಾಗೂ ಪ್ಲೇ-ಆಫ್ ತಲುಪುವಲ್ಲಿ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಯು ತನ್ನ ಹಿಂದಿನ ಕೋಚಿಂಗ್ ಸಿಬ್ಬಂದಿಯನ್ನು ಬದಲಾಯಿಸಿ ಸಂಪೂರ್ಣ ಹೊಸ ತಂಡವನ್ನು ರಚಿಸಿದೆ.

ಯುವರಾಜ್ ಸಿಂಗ್ ಅವರಿಗೆ ಡೆಲ್ಲಿ ಫ್ರಾಂಚೈಸಿ ಹೊಸದೇನಲ್ಲ. 2015ರ ಐಪಿಎಲ್ ಹರಾಜಿನಲ್ಲಿ ಆಗಿನ ಡೆಲ್ಲಿ ಡೇರ್‌ಡೆವಿಲ್ಸ್ ತಂಡವು ಯುವಿ ಅವರನ್ನು ಬರೋಬ್ಬರಿ 16 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಆ ಸಮಯದಲ್ಲಿ ಅವರು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು.

ಈಗ 11 ವರ್ಷಗಳ ಬಳಿಕ ಅದೇ ಫ್ರಾಂಚೈಸಿಗೆ ಅವರು ಕೋಚ್ ರೂಪದಲ್ಲಿ ಮರಳಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮತ್ತು ನಿರೀಕ್ಷೆಯನ್ನು ಮೂಡಿಸಿದೆ. ಯುವರಾಜ್ ಅವರ ಮಾರ್ಗದರ್ಶನದಲ್ಲಿ ಡೆಲ್ಲಿ ಯುವ ಆಟಗಾರರು ಯಾವ ರೀತಿ ಬ್ಯಾಟಿಂಗ್ ಪ್ರದರ್ಶನ ನೀಡಲಿದ್ದಾರೆ ಕಾದು ನೋಡಬೇಕಿದೆ.

Must Read