ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದ ತನಿಖೆಯ ಸಂದರ್ಭದಲ್ಲಿ ಆತಂಕಕಾರಿ ಮಾಹಿತಿ ಬಯಲಾಗಿದೆ. ಗುಪ್ತಚರ ಮೂಲಗಳ ಪ್ರಕಾರ, ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಇದೀಗ ಭಾರತದ ವಿರುದ್ಧ ಪ್ರತೀಕಾರದ ಫಿದಾಯೀನ್ ದಾಳಿಗೆ (ಆತ್ಮಹತ್ಯಾ ದಾಳಿ) ಸಿದ್ಧತೆ ನಡೆಸುತ್ತಿದೆ. ಈ ಬಾರಿ ದಾಳಿಯ ನೇತೃತ್ವವನ್ನು ಮಹಿಳೆಯರ ಸಂಘಟನೆ ವಹಿಸಿಕೊಳ್ಳಲಿದೆ ಎನ್ನಲಾಗಿದೆ.
‘ಆಪರೇಷನ್ ಸಿಂಧೂರ’ಕ್ಕೆ ಪ್ರತೀಕಾರವಾಗಿ ಜೈಶ್ ಸಂಘಟನೆಯು ಮಹಿಳಾ ನೇತೃತ್ವದಲ್ಲಿ ದಾಳಿಗೆ ಸಂಚು ರೂಪಿಸುತ್ತಿದೆ ಎಂದು ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ. ಈ ದಾಳಿಗಾಗಿ ಜೈಶ್ ಸಂಘಟನೆಯು ಈಗಾಗಲೇ ನಿಧಿ ಸಂಗ್ರಹಣೆಯಲ್ಲಿ ತೊಡಗಿದೆ. ಪಾಕಿಸ್ತಾನದ ‘ದಾಪೇ’ ಎಂಬ ಮೊಬೈಲ್ ಅಪ್ಲಿಕೇಶನ್ ಸೇರಿದಂತೆ ವಿವಿಧ ಡಿಜಿಟಲ್ ಮಾರ್ಗಗಳ ಮೂಲಕ ಜೈಶ್ ಹಣ ಸಂಗ್ರಹಿಸುತ್ತಿದೆ ಎಂದು ತಿಳಿದುಬಂದಿದೆ.
ಮಹಿಳಾ ಘಟಕದ ನೇತೃತ್ವ ಮತ್ತು ‘ಮೇಡಂ ಸರ್ಜನ್’
ಜೈಶ್ ಸಂಘಟನೆಯು ಈಗಾಗಲೇ ತನ್ನದೇ ಆದ ಮಹಿಳಾ ಘಟಕವನ್ನು ಹೊಂದಿದೆ. ಈ ಘಟಕವು ಜೈಶ್‌ನ ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಕೆಂಪುಕೋಟೆ ಸ್ಫೋಟ ಪ್ರಕರಣದ ಪ್ರಮುಖ ಶಂಕಿತರಲ್ಲಿ ಒಬ್ಬಳಾದ ಡಾ. ಶಾಹಿನಾ ಸಯೀದ್ ಸಹ ಈ ಮಹಿಳಾ ಘಟಕದ ಸದಸ್ಯೆಯಾಗಿದ್ದಳು. ಈಕೆ ಸಂಘಟನೆಯೊಳಗೆ ‘ಮೇಡಂ ಸರ್ಜನ್’ ಎಂಬ ಹೆಸರಿನಿಂದ ಚಿರಪರಿಚಿತಳಾಗಿದ್ದಳು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಉಗ್ರ ಚಟುವಟಿಕೆಗಳಿಗೆ ನಿಧಿ ಸಂಗ್ರಹಣೆ ಮಾಡುತ್ತಿರುವ ಜೈಶ್, ದಾಳಿಗೂ ಮುನ್ನ ಮತ್ತು ಬಳಿಕ ಭಯೋತ್ಪಾದಕರಿಗೆ ಅಗತ್ಯವಿರುವ ಶೂ, ಸಾಕ್ಸ್, ಹಾಸಿಗೆ ಮತ್ತು ಟೆಂಟ್‌ಗಳನ್ನು ಖರೀದಿಸಲು ದೇಣಿಗೆ ನೀಡುವಂತೆ ಕೇಳಿಕೊಂಡಿದೆ. ಪ್ರತಿ ಉಗ್ರಗಾಮಿಗಾಗಿ ತಲಾ 20,000 ಪಾಕಿಸ್ತಾನಿ ರೂಪಾಯಿ ಅಥವಾ ಸುಮಾರು 6,400 ಭಾರತದ ರೂಪಾಯಿ ದೇಣಿಗೆ ಸಂಗ್ರಹಿಸಲು ಸಂಘಟನೆ ಮುಂದಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

