September 3, 2026
Thursday, September 3, 2026
spot_img

AI, ರೋಬೋಟಿಕ್ಸ್ ಯುಗದಲ್ಲಿ ಕೌಶಲಾಧಾರಿತ ಶಿಕ್ಷಣವೇ ಅಗತ್ಯ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

ಹೊಸದಿಗಂತ ವರದಿ ಚಿತ್ರದುರ್ಗ:

ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಬಯೋಟೆಕ್ನಾಲಜಿ ಹಾಗೂ ಡಿಜಿಟಲ್ ತಂತ್ರಜ್ಞಾನದ ಪಾತ್ರ ಪ್ರಮುಖವಾಗಿದ್ದು, ವಿದ್ಯಾರ್ಥಿಗಳಿಗೆ ಕೌಶಲ ಮತ್ತು ನಾವೀನ್ಯತೆ ಆಧಾರಿತ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ತಿಳಿಸಿದರು.

ಹಿರಿಯೂರು ತಾಲ್ಲೂಕಿನ ಹೊಸಯಳನಾಡು ಗ್ರಾಮದಲ್ಲಿ ಗುರುವಾರ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಶಾಲಾ ಕೊಠಡಿಗಳು, ಪ್ರಾರ್ಥನಾ ಮಂದಿರ ಹಾಗೂ ಕುಟೀರಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ವಿಜ್ಞಾನ ಮಾದರಿಗಳ ತಯಾರಿಕೆ, ಪರಿಸರ ಯೋಜನಾ ಚಟುವಟಿಕೆಗಳು, ರೀಡಿಂಗ್ ಕ್ಲಬ್‌ಗಳು, ಕ್ರೀಡೆ ಹಾಗೂ ಕೌಶಲಾಭಿವೃದ್ಧಿ ಚಟುವಟಿಕೆಗಳನ್ನು ಶಾಲಾ ಹಂತದಲ್ಲೇ ಹೆಚ್ಚು ಪ್ರೋತ್ಸಾಹಿಸಬೇಕು. ಸಣ್ಣ ನಾವೀನ್ಯತಾ ಯೋಜನೆಗಳ ಮೂಲಕ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಆವಿಷ್ಕಾರದ ಮನೋಭಾವವನ್ನು ಬೆಳೆಸಬೇಕು ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.

ಶಾಲೆಗಳು ಕೇವಲ ಶಿಕ್ಷಣದ ಕೇಂದ್ರಗಳಾಗಷ್ಟೇ ಅಲ್ಲದೆ ಪರಿಸರ ಜಾಗೃತಿಯ ಕೇಂದ್ರಗಳಾಗಿಯೂ ಹೊರಹೊಮ್ಮಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಸಸಿನೆಟ್ಟು ಪೋಷಿಸಬೇಕು. ಜಲ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ಕಡಮೆ ಮಾಡುವುದು, ಶಕ್ತಿ ಉಳಿತಾಯ ಹಾಗೂ ಶಾಲೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಿಕ್ಷಣದೊಂದಿಗೆ ಸಂಸ್ಕಾರ, ಕೌಶಲ ಬೆಳೆಯಲಿ:

ಶಿಕ್ಷಣ ಎಂದರೆ ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವುದು ಅಥವಾ ಉದ್ಯೋಗ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿರಬಾರದು. ಜ್ಞಾನದೊಂದಿಗೆ ವಿವೇಕ, ವಿಜ್ಞಾನದೊಂದಿಗೆ ಸಂವೇದನೆ, ಯಶಸ್ಸಿನೊಂದಿಗೆ ಸಂಸ್ಕಾರ ಹಾಗೂ ಹಕ್ಕುಗಳೊಂದಿಗೆ ಕರ್ತವ್ಯ ಪ್ರಜ್ಞೆಯನ್ನು ಮೂಡಿಸುವುದೇ ನಿಜವಾದ ಶಿಕ್ಷಣದ ಮುಖ್ಯ ಉದ್ದೇಶ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.

ಇದನ್ನೂ ಓದಿ:

ನವ ನಿರ್ಮಿತ ತರಗತಿಗಳನ್ನು ಉದ್ಘಾಟಿಸುತ್ತಿರುವುದು ಕೇವಲ ಕಟ್ಟಡದ ಆರಂಭವಲ್ಲ, ಬದಲಿಗೆ ಕರ್ನಾಟಕ ಮತ್ತು ಭಾರತದ ಭವಿಷ್ಯದ ನಿರ್ಮಾಣಕ್ಕೆ ತಳಪಾತ ಹಾಕಿದಂತೆ. ಈ ತರಗತಿಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಶಿಕ್ಷಕರು, ಆಡಳಿತಾಧಿಕಾರಿಗಳು, ಉದ್ಯಮಿಗಳು ಹಾಗೂ ದೇಶಸೇವಕರಾಗಿ ಹೊರಹೊಮ್ಮಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣವನ್ನು ಹೆಚ್ಚು ಸಮಗ್ರ, ಕೌಶಲಾಧಾರಿತ ಹಾಗೂ ನಾವೀನ್ಯತೆ ಕೇಂದ್ರಿತಗೊಳಿಸಲು ಒತ್ತು ನೀಡಿದೆ. ಇಂದು ವಿದ್ಯಾರ್ಥಿಗಳು ಕೇವಲ ಪುಸ್ತಕಗಳಿಗೆ ಸೀಮಿತವಾಗದೆ ಪ್ರಯೋಗಾಲಯ, ಕ್ರೀಡಾಂಗಣ, ಕಲೆ, ಸಂಸ್ಕೃತಿ ಮತ್ತು ತಂತ್ರಜ್ಞಾನದ ಸೃಜನಶೀಲ ಬಳಕೆಯಲ್ಲಿ ತೊಡಗಿಸಿಕೊಳ್ಳಬೇಕು. ಭಾರತ ಹಾಗೂ ಕರ್ನಾಟಕದ ಸುದೀರ್ಘ ಜ್ಞಾನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸಿದ ಅವರು, ಆಧುನಿಕ ತಂತ್ರಜ್ಞಾನದ ಜೊತೆಗೆ ತಮ್ಮ ಸಾಂಸ್ಕೃತಿಕ ಬೇರುಗಳನ್ನು ಮರೆಯಬಾರದು ಎಂದರು.

‘ವಿಕಸಿತ ಭಾರತ’ದ ಕನಸು ನನಸಾಗಲು ಹೆಣ್ಣುಮಕ್ಕಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪ್ರತಿಯೊಬ್ಬ ಹೆಣ್ಣುಮಗಳಿಗೆ ಗುಣಮಟ್ಟದ ಶಿಕ್ಷಣ, ಸುರಕ್ಷತೆ, ಆರೋಗ್ಯ ಮತ್ತು ಆತ್ಮವಿಶ್ವಾಸ ಸಿಗುವಂತಾಗಬೇಕು. ವಿದ್ಯಾವಂತ ಹೆಣ್ಣುಮಕ್ಕಳು ಇಡೀ ಕುಟುಂಬ ಮತ್ತು ಸಮಾಜದ ಭವಿಷ್ಯವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !