ಕೌಶಲ್ಯ ಅಭಿವೃದ್ಧಿ ನಿಗಮ ಹಗರಣ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕ್ಲೀನ್ ಚಿಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, 371 ಕೋಟಿ ರೂ. ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕ್ಲೀನ್ ಚಿಟ್ ನೀಡಿದೆ.

ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ನಡೆಸಿದ ತನಿಖೆಯ ಮೇರೆಗೆ ಕಳೆದ ವರ್ಷ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿತ್ತು. ಅಕ್ಟೋಬರ್ 31, 2023ರಂದು ಮಧ್ಯಂತರ ಜಾಮೀನು ಪಡೆಯುವ ಮೊದಲು ಅವರು 50 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದರು.

ಆಂಧ್ರಪ್ರದೇಶ ಸಿಐಡಿ ನಡೆಸಿದ ತನಿಖೆಯ ಪ್ರಕಾರ ಕಳೆದ ವರ್ಷ ಸೆಪ್ಟೆಂಬರ್ 9 ರಂದು ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಯಿತು. ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದ ಅವರ ಅರ್ಜಿಯು ನ್ಯಾಯಾಲಯದಲ್ಲಿ ಬಾಕಿಯಿರುವುದರಿಂದ ಅಕ್ಟೋಬರ್ 18ರವರೆಗೆ ಫೈಬರ್ ನೆಟ್ ಪ್ರಕರಣದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸುವುದಿಲ್ಲ ಎಂದು ಆಂಧ್ರಪ್ರದೇಶ ಪೊಲೀಸರು ಅಕ್ಟೋಬರ್ 13ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.

ಆಂಧ್ರಪ್ರದೇಶದಲ್ಲಿ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಎರಡು ಖಾಸಗಿ ಸಂಸ್ಥೆಗಳಾದ ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್‌ವೇರ್ (ಇಂಡಿಯಾ) ಮತ್ತು ಡಿಸೈನ್‌ಟೆಕ್ ಸಿಸ್ಟಮ್‌ಗಳ ಉನ್ನತ ಕಾರ್ಯನಿರ್ವಾಹಕರಿಗೆ ಸಂಬಂಧಿಸಿದ 23.54 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.ಈ ಎರಡು ಖಾಸಗಿ ಸಂಸ್ಥೆಗಳು ಮತ್ತು ಅದರ ಕಾರ್ಯನಿರ್ವಾಹಕರಿಗೆ ಸಂಬಂಧಿಸಿದ 151 ಕೋಟಿ ರೂಪಾಯಿಗಳ ಹಣದ ಜಾಡು ಪತ್ತೆ ಮಾಡಿದರೂ, ಆ ಪ್ರಕರಣದಲ್ಲಿ ಹಣವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಚಂದ್ರಬಾಬು ನಾಯ್ಡು ಅವರ ಪಾತ್ರವನ್ನು ದೃಢೀಕರಿಸುವ ಯಾವುದೇ ಪುರಾವೆಗಳನ್ನು ತನಿಖಾಧಿಕಾರಿಗಳು ಇಲ್ಲಿಯವರೆಗೆ ಕಂಡುಕೊಂಡಿಲ್ಲ. ಹೀಗಾಗಿ, ಇಡಿ ಕ್ಲೀನ್ ಚಿಟ್ ನೀಡಿದೆ.

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಾಯ್ಡುಗೆ ಜಾಮೀನು ಅಗತ್ಯವಿದೆ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ವೈದ್ಯಕೀಯ ಆಧಾರದ ಮೇಲೆ ಅವರು ಅಕ್ಟೋಬರ್ 31, 2023ರಂದು ಮಧ್ಯಂತರ ಜಾಮೀನು ಪಡೆದಿದ್ದರು.ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕನಿಗೆ ನವೆಂಬರ್ 20 ರಂದು ಆಂಧ್ರಪ್ರದೇಶ ಹೈಕೋರ್ಟ್ ನಿಯಮಿತ ಜಾಮೀನು ನೀಡಿತು. ಅದಾದ ಒಂದು ವಾರದ ನಂತರ ಸಾರ್ವಜನಿಕ ರ್ಯಾಲಿಗಳು ಮತ್ತು ಸಭೆಗಳಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್ ಅವರಿಗೆ ಅನುಮತಿ ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!