ಹಾಲು ಕೇವಲ ಉತ್ತಮ ಆಹಾರವಷ್ಟೇ ಅಲ್ಲ, ಅದು ತ್ವಚೆಯ ಪಾಲಿನ ಸಂಜೀವಿನಿ ಕೂಡ ಹೌದು. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ, ವಿಟಮಿನ್ ಎ, ಪ್ರೋಟೀನ್ ಮತ್ತು ಆ್ಯಂಟಿ-ಆಕ್ಸಿಡೆಂಟ್ಗಳು ಚರ್ಮಕ್ಕೆ ಅದ್ಭುತವಾದ ಪೋಷಣೆ ನೀಡುತ್ತವೆ. ದುಬಾರಿ ಸೌಂದರ್ಯವರ್ಧಕಗಳಿಗಿಂತ ಹಸಿ ಹಾಲು ಹೇಗೆ ಉತ್ತಮ ಎಂಬುದರ ವಿವರ ಇಲ್ಲಿದೆ:
ನೈಸರ್ಗಿಕ ಕ್ಲೆನ್ಸರ್: ಹಸಿ ಹಾಲು ಚರ್ಮದ ರಂಧ್ರಗಳ ಆಳಕ್ಕೆ ಇಳಿದು ಕೊಳೆಯನ್ನು ತೆಗೆದುಹಾಕುತ್ತದೆ. ಇದು ಸತ್ತ ಕೋಶಗಳನ್ನು ನಿವಾರಿಸಿ ಮುಖಕ್ಕೆ ಹೊಸ ಕಳೆಯನ್ನು ನೀಡುತ್ತದೆ.
ಶುಷ್ಕತೆಗೆ ವಿದಾಯ: ವಿಶೇಷವಾಗಿ ಚಳಿಗಾಲದಲ್ಲಿ ಚರ್ಮ ಒಣಗುವುದು ಸಹಜ. ದಿನಕ್ಕೆ ಎರಡು ಬಾರಿ ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮವು ತೇವಾಂಶದಿಂದ ಕೂಡಿರುತ್ತದೆ ಮತ್ತು ಮೃದುವಾಗುತ್ತದೆ.
ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ: ವಿಟಮಿನ್ ಎ ಸಮೃದ್ಧವಾಗಿರುವ ಹಸಿ ಹಾಲು ಮುಖದಲ್ಲಿ ಕಾಣಿಸಿಕೊಳ್ಳುವ ಸುಕ್ಕುಗಳನ್ನು ಮತ್ತು ಗೆರೆಗಳನ್ನು ಕಡಿಮೆ ಮಾಡಿ, ನಿಮ್ಮನ್ನು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
ಕಲೆ ಮತ್ತು ಟ್ಯಾನಿಂಗ್ ನಿವಾರಣೆ: ಬಿಸಿಲಿನಿಂದಾದ ಟ್ಯಾನಿಂಗ್ ಅಥವಾ ಮೊಡವೆಯ ಕಲೆಗಳನ್ನು ಹೋಗಲಾಡಿಸಲು ಹಸಿ ಹಾಲು ರಾಮಬಾಣ. ಇದು ಚರ್ಮದ ಕಿರಿಕಿರಿಯನ್ನು ಶಮನಗೊಳಿಸಿ ತ್ವಚೆಯನ್ನು ತಂಪಾಗಿಸುತ್ತದೆ.
ಹಚ್ಚುವ ವಿಧಾನ ಹೀಗಿರಲಿ:
ಸ್ವಲ್ಪ ಹಸಿ ಹಾಲನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ.
ಒಂದು ಚಿಕ್ಕ ಹತ್ತಿ ಉಂಡೆಯನ್ನು ಹಾಲಿನಲ್ಲಿ ಅದ್ದಿ ಮುಖದ ಮೇಲೆ ನಿಧಾನವಾಗಿ ಹಚ್ಚಿಕೊಳ್ಳಿ.
15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ.
ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಉತ್ತಮ ಫಲಿತಾಂಶಕ್ಕಾಗಿ ರಾತ್ರಿ ಮಲಗುವ ಮುನ್ನ ಹಸಿ ಹಾಲನ್ನು ಹಚ್ಚಿ, ಬೆಳಿಗ್ಗೆ ಮುಖ ತೊಳೆದರೆ ನಿಮ್ಮ ಚರ್ಮವು ನೈಸರ್ಗಿಕವಾಗಿ ಹೊಳೆಯಲು ಪ್ರಾರಂಭಿಸುತ್ತದೆ.

