ರಾತ್ರಿ ಹಾಸಿಗೆಯ ಮೇಲೆ ಮಲಗಿದ್ರೂ ಮನಸು ಶಾಂತವಾಗಲ್ಲ, ಕಣ್ಣು ಮುಚ್ಚಿದ ಕೆಲವೇ ಹೊತ್ತಲ್ಲಿ ಮತ್ತೆ ಮತ್ತೆ ಎಚ್ಚರವಾಗುತ್ತೀರಾ? ಬೆಳಿಗ್ಗೆ ಎದ್ದಾಗ ದೇಹ ದಣಿದಂತೆ, ತಲೆ ಭಾರವಾದಂತೆ ಅನ್ನಿಸುತ್ತಿದೆಯಾ? ಇದಕ್ಕೆ ಒತ್ತಡ, ಮೊಬೈಲ್ ಬಳಕೆ ಮಾತ್ರ ಕಾರಣ ಅಂತ ಅಂದುಕೊಳ್ಳಬೇಡಿ. ನೀವು ರಾತ್ರಿ ಊಟದಲ್ಲಿ ತಿನ್ನುವ ಕೆಲವು ಆಹಾರಗಳೂ ನಿದ್ದೆ ಹಾಳಾಗಲು ದೊಡ್ಡ ಕಾರಣವಾಗಬಹುದು. ನಿದ್ದೆ ಎನ್ನುವುದು ದೇಹಕ್ಕೆ ಸ್ವಾಭಾವಿಕ ರೀಚಾರ್ಜ್ ಪ್ರಕ್ರಿಯೆ. ಅದನ್ನ ಅಡ್ಡಿಪಡಿಸುವ ಆಹಾರಗಳು ಯಾವವು ಅನ್ನೋದನ್ನ ತಿಳ್ಕೊಂಡ್ರೆ, ಸಮಸ್ಯೆಯ ಅರ್ಧ ಭಾಗ ಅಲ್ಲಿಯೇ ಮುಗಿದಂತೆ.
ಸಂಜೆ ಬಳಿಕ ಕಾಫಿ ಅಥವಾ ಸ್ಟ್ರಾಂಗ್ ಟೀ ಕುಡಿಯುವ ಅಭ್ಯಾಸ ಇದ್ದರೆ, ಅದು ಮೆದುಳನ್ನು ಜಾಗೃತ ಸ್ಥಿತಿಯಲ್ಲಿ ಇಡುತ್ತದೆ. ಕ್ಯಾಫಿನ್ ದೇಹದಿಂದ ಹೊರಹೋಗಲು ಹಲವು ಗಂಟೆಗಳು ಬೇಕಾಗುತ್ತವೆ. ಇದರಿಂದ ಕಣ್ಣು ಮುಚ್ಚಿದ್ರೂ ನಿದ್ದೆ ಆಳವಾಗಿ ಬರುವುದಿಲ್ಲ.
ರಾತ್ರಿ ಹೊತ್ತಲ್ಲಿ ಖಾರವಾದ, ಮಸಾಲೆ ಹೆಚ್ಚಿರುವ ಊಟ ಮಾಡಿದರೆ ಜಠರದಲ್ಲಿ ಉರಿಯೂತ ಉಂಟಾಗಬಹುದು. ಇದರಿಂದ ಆಸಿಡ್ ರಿಫ್ಲಕ್ಸ್, ಎದೆ ಉರಿ ಉಂಟಾಗಿ ನಿದ್ದೆ ಮಧ್ಯದಲ್ಲೇ ಭಂಗವಾಗುತ್ತದೆ.
ಅತಿಯಾಗಿ ಸಕ್ಕರೆ ಇರುವ ಆಹಾರ ರಕ್ತದಲ್ಲಿನ ಶರ್ಕರ ಮಟ್ಟವನ್ನು ತಕ್ಷಣ ಹೆಚ್ಚಿಸಿ ಮತ್ತೆ ತಗ್ಗಿಸುತ್ತದೆ. ಈ ಏರಿಳಿತ ನಿದ್ರೆಯ ಮಧ್ಯೆ ದೇಹವನ್ನು ಅಚಾನಕ್ ಜಾಗೃತಗೊಳಿಸುತ್ತದೆ.
ಫ್ರೈಡ್ ಐಟಂಗಳು, ಫಾಸ್ಟ್ ಫುಡ್‌ಗಳು ಜೀರ್ಣಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಹೊಟ್ಟೆ ತುಂಬಿರುವ ಭಾವನೆ ನಿದ್ದೆ ಬರಲು ಅಡ್ಡಿಯಾಗುತ್ತದೆ.
ಮದ್ಯ ಕುಡಿದರೆ ಬೇಗ ನಿದ್ದೆ ಬರಬಹುದು ಅನ್ನೋ ಭ್ರಮೆ ಇದೆ. ಆದರೆ ಅದು ಆಳವಾದ ನಿದ್ದೆಯನ್ನು ಹಾಳುಮಾಡುತ್ತದೆ. ರಾತ್ರಿ ಮಧ್ಯೆ ಮಧ್ಯೆ ಎಚ್ಚರವಾಗಲು ಇದು ಪ್ರಮುಖ ಕಾರಣ.
ಮಲಗುವ ಮೊದಲು ಹೆಚ್ಚು ನೀರು ಕುಡಿದರೆ, ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗಿ ನಿದ್ದೆ ಹಾಳಾಗುತ್ತದೆ.
ನಿಮ್ಮ ನಿದ್ದೆ ಸಮಸ್ಯೆಗೆ ಮಾತ್ರೆ ಹುಡುಕುವ ಮೊದಲು, ನಿಮ್ಮ ಪ್ಲೇಟ್‌ನತ್ತ ಒಮ್ಮೆ ಗಮನ ಕೊಡಿ. ಸರಿಯಾದ ಆಹಾರ ಆಯ್ಕೆ ಮಾಡಿದ್ರೆ, ಆಳವಾದ ನಿದ್ದೆ ಮತ್ತೆ ನಿಮ್ಮ ಜೀವನಕ್ಕೆ ಮರಳಬಹುದು.


