ಹೊಸದಿಗಂತ ವರದಿ ಬೆಳಗಾವಿ:
ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಯುವಕ, ಯುವತಿ ಓಡಿ ಹೋದ ಪ್ರಕರಣದಿಂದಾಗಿ ಯುವತಿ ಮನೆಯವರು ಯುವಕನ ತಾಯಿ ಮೇಲೆ ದೌರ್ಜನ್ಯ ಎಸಗಿದ ಘಟನೆ ಮಾಸುವ ಮುನ್ನವೇ ಅಂತಹುದೇ ದುರ್ಘಟನೆಗೆ ಬೆಳಗಾವಿ ಮತ್ತೊಮ್ಮೆ ಸಾಕ್ಷಿಯಾಗಿದೆ.
ತ್ರಿಕೋನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜ್ ಕಟ್ಟೆ ಹತ್ತಿರುವ ಹುಡಗರು ಮಾರಕಾಸ್ತ್ರಗಳಿಂದ ನಾಲ್ಕೈದು ಮನೆಗಳನ್ನು ಧ್ವಂಸಗೊಳಿಸಿದ ಘಟನೆ ಸೋಮವಾರ ಮಧ್ಯೆ ರಾತ್ರಿ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ನಡೆದಿದೆ.
ಮುಸುಕುಧಾರಿ ದುಷ್ಕರ್ಮಿಗಳು ನಾಲ್ಕೈದು ಮನೆಗಳಿಗೆ ನುಗ್ಗಿ ಗಾಜು, ಗೋಡೆಗಳ ಟೈಲ್ಸ್ ಪುಡಿ ಪುಡಿ ಮಾಡಿದ್ದಾರಲ್ಲದೇ ಮನೆಗಳ ಮುಂದೆ ನಿಲ್ಲಿಸಿದ ಕಾರು, ಆರು ದ್ವಿಚಕ್ರ ವಾಹನಗಳನ್ನು ಧ್ವಂಸ ಮಾಡಿ ಪರಾರಿಯಾಗಿದ್ದಾರೆ.
ಹತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯನ್ನು ಪಿಯುಸಿ ಓದುತ್ತಿದ್ದ ನಾವಗೆ ಗ್ರಾಮದ ಹುಡುಗ ಪ್ರೀತಿಸುತ್ತಿದ್ದ. ಅಲ್ಲದೇ ಇದೇ ಬಾಲಕಿಯನ್ನು ಕರ್ಲೇ ಗ್ರಾಮದ ಯುವಕನೂ ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಇದೇ ಗಲಾಟೆಯಿಂದಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಾವಗೆ ಹುಡುಗನೊಂದಿಗೆ ಜಗಳ ತೆಗೆದಿದ್ದ ಕರ್ಲೇ ಗ್ರಾಮದ ಹುಡುಗರು ಹಲ್ಲೆಗೆ ಮುಂದಾಗಿದ್ದರು.
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ್ದ ನಾವಗೆ ಗ್ರಾಮದ ಹಿರಿಯ, ಗ್ರಾಮದ ಪಂಚ ಮಾರುತಿ ಎಂಬವರು ಕರ್ಲೇ ಹುಡುಗನಿಗೆ ಒಂದೆರೆಡು ಏಟು ಕೊಟ್ಟು ಬುದ್ಧಿವಾದ ಹೇಳಿದ್ದರು. ಈ ಘಟನೆಯಲ್ಲಿ ಖಾದರವಾಡಿ ಹುಡುಗರ ಪ್ರವೇಶ ಆಗಿ, ಕರ್ಲೇ ಹುಡುಗನನ್ನು ಬೆಂಬಲಿಸಿ ಸುಮಾರು ಇಪ್ಪತ್ತು ಮೂವತ್ತು ಎಳಸಲು ಹುಡಗರ ಗುಂಪು ಸೋಮವಾರ ಮಧ್ಯೆ ರಾತ್ರಿ ತಲ್ವಾರ್, ಲಾಂಗ್, ಮಚ್ಚು, ರಾಡ್ ಗಳಿಂದ ದಾಳಿ ಮಾಡಿ ದುಷ್ಕರ್ತ್ಯ ಎಸಗಿದೆ.
ಪುಂಡರ ಅಟ್ಟಹಾಸದಿಂದ ಇಡೀ ನಾವಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಡಿಸಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಮೂರು ತಂಡಗಳನ್ನು ರಚಿಸಿದ್ದಾರೆ.