February 22, 2026
Sunday, February 22, 2026
spot_img

ದಂತ ಆರೋಗ್ಯ ಜಾಗೃತಿಗೆ ‘ಸ್ಮೈಲಥಾನ್’: ಭಾಗವಹಿಸೋದಕ್ಕೆ ನೀವು ರೆಡಿನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಂತ ಆರೋಗ್ಯ ಜಾಗೃತಿಯನ್ನು ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶದಿಂದ ಇಂಡಿಯನ್ ಡೆಂಟಲ್‌ ಅಸೋಸಿಯೇಶನ್‌ (ಐಡಿಎ) ಬೆಂಬಲಿತ ‘ಸ್ಮೈಲಥಾನ್’ ಎಂಬ ಅತಿದೊಡ್ಡ ಸ್ಮೈಲ್‌ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 6 ಲಕ್ಷ ರೂಪಾಯಿ ನಗದು ಬಹುಮಾನಗಳ ಜೊತೆಗೆ ಮುಂಚಿತ ರೋಗ ಪತ್ತೆಗೆ ಒತ್ತು ನೀಡಲಾಗಿದ್ದು, ಐಡಿಎ ಅನುಮೋದಿತ ಕ್ಲಿನಿಕ್‌ಗಳಲ್ಲಿ ಭಾಗವಹಿಸುವ 1 ಲಕ್ಷಕ್ಕೂ ಅಧಿಕ ಸ್ಪರ್ಧಿಗಳಿಗೆ ಕಡ್ಡಾಯವಾಗಿ ಉಚಿತ ದಂತ ತಪಾಸಣೆ ಒದಗಿಸಲಾಗುತ್ತದೆ.

ಈ ಉಪಕ್ರಮವನ್ನು ಇಂಡಿಯನ್ ಡೆಂಟಲ್‌ ಅಸೋಸಿಯೇಶನ್‌, ಕರ್ನಾಟಕ ಸರ್ಕಾರ, ಇಂಡಿಯನ್ ಪ್ರೊಸ್ತೊಡೊಂಟಿಕ್‌ ಸೊಸೈಟಿ (ಐಪಿಎಸ್‌) ಹಾಗೂ ರೋಟರಿ ಬೆಂಗಳೂರು ಸೋಶಿಯಲ್‌ ಕ್ಲಬ್‌ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ದಂತ ಆರೋಗ್ಯವನ್ನು ದಿನನಿತ್ಯದ ಸಂಭಾಷಣೆಯ ಭಾಗವನ್ನಾಗಿಸುವುದು ಮತ್ತು ಜನರು ಆರೋಗ್ಯವಂತ ನಗುವಿನೊಂದಿಗೆ ಉತ್ತಮ ಜೀವನ ನಡೆಸುವಂತೆ ಪ್ರೇರೇಪಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.

ಕಾರ್ಯಕ್ರಮದ ಕುರಿತು ಮಾತನಾಡಿದ ಸ್ಮೈಲಥಾನ್ ಆಯೋಜನಾ ಚೇರ್ಮನ್ ಡಾ. ಅಕ್ಷಯ್ ಎಮ್ ಶೆಟ್ಟಿ, ಇಂದಿನ ಯುವಜನತೆ ವೆಲ್‌ನೆಸ್ ಮತ್ತು ಬ್ಯೂಟಿಗೆ ಹೆಚ್ಚು ಒತ್ತು ನೀಡುತ್ತಾ ದಂತ ತಪಾಸಣೆಯನ್ನು ನಿರ್ಲಕ್ಷ್ಯಿಸುತ್ತಿರುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿದರು. ಸ್ಮೈಲಥಾನ್ ಸ್ಪರ್ಧೆಯಲ್ಲಿ ಪ್ರತಿಯೊಬ್ಬ ಸ್ಪರ್ಧಿಗೂ ಉಚಿತ ದಂತ ತಪಾಸಣೆಯನ್ನು ಕಡ್ಡಾಯಗೊಳಿಸುವ ಮೂಲಕ ಮುಂಚಿತ ಸಮಸ್ಯೆ ಪತ್ತೆ, ರಾಜ್ಯಾದ್ಯಂತ ಜಾಗೃತಿ ಮತ್ತು ಜೀವನಪರ್ಯಂತ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ನೂತನ ರಾಷ್ಟ್ರೀಯ ಮಾಹಿತಿಯ ಪ್ರಕಾರ ಶೇ. 90 ರಷ್ಟು ಭಾರತೀಯರು ದಂತ ಸಮಸ್ಯೆಯಿಂದ ಬಳಲುತ್ತಿದ್ದು, ಶೇ. 9 ರಷ್ಟು ಜನ ಮಾತ್ರ ನಿಯಮಿತವಾಗಿ ದಂತವೈದ್ಯರನ್ನು ಭೇಟಿ ಮಾಡುತ್ತಾರೆ. ವಿಶೇಷವಾಗಿ 15ರಿಂದ 30 ವರ್ಷದ ವಯೋಮಾನದವರಲ್ಲಿ ಈ ಕುರಿತು ಜಾಗೃತಿ ಕಡಿಮೆಯಿದೆ. ಪೆರಿಯೊಡೊಂಟಿಟಿಸ್‌ನಂತಹ ಸಮಸ್ಯೆಗಳು ಬ್ಯಾಕ್ಟೀರಿಯಾಗಳು ರಕ್ತಕ್ಕೆ ಸೇರಲು ಕಾರಣವಾಗಿ ಡಯಾಬಿಟಿಸ್‌, ಹೃದಯ ಸಂಬಂಧಿ ಸಮಸ್ಯೆಗಳು, ಆಸ್ಟಿಯೊಪೊರೊಸಿಸ್ ಹಾಗೂ ಇನ್ಫ್ಲಮೆಟರಿ ಡಿಸಾರ್ಡರ್‌ಗಳ ಅಪಾಯವನ್ನು ಹೆಚ್ಚಿಸುತ್ತವೆ. ಕಳಪೆ ದಂತ ನೈರ್ಮಲ್ಯವು ಆತ್ಮವಿಶ್ವಾಸ, ಶೈಕ್ಷಣಿಕ ಸಾಧನೆ ಮತ್ತು ಸಾಮಾಜಿಕ ವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ.

ಸ್ಪರ್ಧೆಯಲ್ಲಿ 18ರಿಂದ 29 ವರ್ಷದ ಮಹಿಳೆ ಮತ್ತು ಪುರುಷರು ಹಾಗೂ 30ರಿಂದ 45 ವರ್ಷದ ಮಹಿಳೆಯರು ಭಾಗವಹಿಸಬಹುದು. ಸ್ಪರ್ಧಿಗಳು ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಪಾಲುದಾರ ಕ್ಲಿನಿಕ್‌ಗಳಲ್ಲಿ ಕಡ್ಡಾಯ ಉಚಿತ ದಂತ ತಪಾಸಣೆ, ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಅಪ್‌ಲೋಡ್ ಮತ್ತು ಸಾರ್ವಜನಿಕ ಮತದಾನ ಪ್ರಕ್ರಿಯೆಗಳು ನಡೆಯಲಿವೆ. ಟಾಪ್ 500 ಸ್ಪರ್ಧಿಗಳ ಆಯ್ಕೆಯೊಂದಿಗೆ ಪ್ರಿ-ಫಿನಾಲೆ ನಡೆಯಲಿದ್ದು, ಅಂತಿಮವಾಗಿ ಟಾಪ್ 32 ಸ್ಪರ್ಧಿಗಳು ಮಾರ್ಚ್ 1, 2026ರಂದು ನಡೆಯುವ ಫಿನಾಲೆಗೆ ಆಯ್ಕೆಯಾಗುತ್ತಾರೆ. ಫಿನಾಲೆ ಬೆಂಗಳೂರು ಪ್ಯಾಲೆಸ್ ಗ್ರೌಂಡ್‌ನಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ 6 ಲಕ್ಷ ರೂಪಾಯಿವರೆಗೆ ನಗದು ಬಹುಮಾನಗಳು, ಗ್ರೂಮಿಂಗ್ ಕಿಟ್‌ಗಳು ಹಾಗೂ ದಂತ ಆರೋಗ್ಯ ಪ್ಯಾಕೇಜ್‌ಗಳನ್ನು ಗೆಲ್ಲುವ ಅವಕಾಶವಿದೆ.

ಡೆಂಟಲ್ ಕ್ಲಿನಿಕ್‌ಗಳ ಮಿತಿಯನ್ನು ಮೀರಿ ದಂತ ಆರೋಗ್ಯದ ಚರ್ಚೆಯನ್ನು ನೆರೆಹೊರೆ, ಕೆಲಸದ ಸ್ಥಳ ಮತ್ತು ಡಿಜಿಟಲ್ ವೇದಿಕೆಗಳಿಗೆ ವಿಸ್ತರಿಸುವ ಜೊತೆಗೆ, ದಂತ ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯದ ನಡುವಿನ ನೇರ ಸಂಬಂಧವನ್ನು ಈ ಕಾರ್ಯಕ್ರಮ ಒತ್ತಿ ಹೇಳುತ್ತದೆ. ರೋಟರಿ ಬೆಂಗಳೂರು ಸೋಶಿಯಲ್‌ ಕ್ಲಬ್ ಈ ಉಪಕ್ರಮವನ್ನು ಬಲಿಷ್ಠ ಸಮುದಾಯ ಸಂಪರ್ಕ ಮತ್ತು ಜಾಲಗಳ ಮೂಲಕ ಬೆಂಬಲಿಸುತ್ತಿದ್ದು, ಕಾರ್ಯಕ್ರಮದ ಆದಾಯದ ಒಂದು ಭಾಗವನ್ನು ಸಮಾಜಕ್ಕೆ ಮರಳಿ ನೀಡುವ ಉದ್ದೇಶವನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ www.ssmileathon.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !