Saturday, December 20, 2025

ತೈವಾನ್ ನಲ್ಲಿ ಸ್ಮೋಕ್ ಬಾಂಬ್ ಎಸೆದು ಚಾಕುವಿನಿಂದ ದಾಳಿ: ಮೂವರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೈವಾನ್ ರಾಜಧಾನಿ ತೈಪೆ ನಗರದಲ್ಲಿ, ಜನಸಂಚಾರ ಹೆಚ್ಚಿರುವ ರೈಲು ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ನಡೆಸಿದ ಅಚಾನಕ್ ದಾಳಿಯಿಂದ ಮೂವರು ಜೀವ ಕಳೆದುಕೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಶಂಕಿತ ವ್ಯಕ್ತಿ ತೈಪೆಯ ಪ್ರಮುಖ ರೈಲು ನಿಲ್ದಾಣದ ಸಮೀಪ ಸ್ಮೋಕ್ ಬಾಂಬ್ ಎಸೆದು ಗೊಂದಲ ಸೃಷ್ಟಿಸಿದ್ದಾನೆ. ಹಠಾತ್ ಉಂಟಾದ ಹೊಗೆ ಮತ್ತು ಆತಂಕದಿಂದ ಜನರು ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದ ವೇಳೆ, ಆತ ಚಾಕುವಿನಿಂದ ಮನಬಂದಂತೆ ದಾಳಿ ನಡೆಸಿದ್ದಾನೆ. ಈ ಹಿಂಸಾಚಾರದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಲಭ್ಯವಾದ ತಕ್ಷಣವೇ ತೈಪೆ ಪೊಲೀಸರು ಭಾರೀ ಕಾರ್ಯಾಚರಣೆ ಆರಂಭಿಸಿದ್ದಾರೆ. ಶಂಕಿತನನ್ನು ಹಿಡಿಯಲು ಸುತ್ತಮುತ್ತಲಿನ ಪ್ರದೇಶವನ್ನು ಸುತ್ತುವರಿದು ತೀವ್ರ ಶೋಧ ನಡೆಸಲಾಯಿತು. ಈ ವೇಳೆ ಆತ ಕಟ್ಟಡದ ಮೇಲ್ಮಹಡಿಯಿಂದ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಈ ದಾಳಿಯಲ್ಲಿ ಶಂಕಿತ ವ್ಯಕ್ತಿ ಒಬ್ಬನೇ ಭಾಗಿಯಾಗಿದ್ದಾನೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಯಾವುದೇ ಸಂಘಟನೆ ಅಥವಾ ಸಹಚರರ ಸಂಪರ್ಕ ಇಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

error: Content is protected !!